ಆರೋಗ್ಯ ತಪಾಸಣೆ, ಸರ್ಕಾರಿ ಯೋಜನೆಗಳ ಮಾಹಿತಿ: ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸೇವಾ ಕಾರ್ಯಕ್ರಮ

ಹಂಚಿಕೊಳ್ಳಿ

ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯ 25 ವರ್ಷಗಳ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಉತ್ತರ ಕನ್ನಡ ವತಿಯಿಂದ ವಿವಿಧ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದರ ಭಾಗವಾಗಿ ‘ಸೇವಾ ಸಂಕಲ್ಪ’ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ‘ಸೇವಾ ಸೇತು’ ಕಾರ್ಯಕ್ರಮವನ್ನು ಅ.9ರಂದು ತಾಲೂಕಿನ ಬಿಳಗಿ ಗ್ರಾಮದ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯಕ್ರಮ ನಡೆಯಲಿದೆ.

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಧಾನಮಂತ್ರಿ ಕಿಸಾನ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು. ಜೊತೆಗೆ ಆಯುಷ್ಮಾನ್ ಕಾರ್ಡ್‌ಗೆ ಸಂಬಂಧಿಸಿದ ಸೇವೆ, ಅಂಚೆ ಕಚೇರಿ ವತಿಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಸೇರಿದಂತೆ ಹಲವು ಸಾರ್ವಜನಿಕ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗಲಿವೆ.

ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಷನ್ ಸಹಯೋಗದಲ್ಲಿ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮವೂ ನಡೆಯಲಿದೆ. ಡಾ. ಮಮತಾ ಹೆಗಡೆ, ದಂತ ವೈದ್ಯೆ ಡಾ. ಪೂಜಿತಾ ಹೆಗಡೆ, ಡಾ. ಸೌಭಾಗ್ಯ, ಡಾ. ರಿಯಾಜ್ ಸಾಗರ್, ಡಾ. ವಿರೇಶ ಎಸ್. ಬಾಳೇಹೊಸೂರ್, ಡಾ. ಶ್ರೇಯಸ್ ವೈದ್ಯ ಹಾಗೂ ಡಾ. ಸಾಹುಕಾರ ಬಿ.ಎಂ. ಅವರು ಆರೋಗ್ಯ ತಪಾಸಣಾ ಸೇವೆ ನೀಡಲಿದ್ದಾರೆ. ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರೋಹಿಣಿ ಸೈಲ್ ಕೂಡ ಉಪಸ್ಥಿತರಿರಲಿದ್ದಾರೆ.

ಶಿಬಿರದಲ್ಲಿ ಕಣ್ಣಿನ ತಪಾಸಣೆ, ಕ್ಯಾನ್ಸರ್ ತಪಾಸಣೆ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನುರಿತ ವೈದ್ಯರಿಂದ ಉಚಿತವಾಗಿ ಮಾಡಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *