ಯಲ್ಲಾಪುರ: ಕನ್ನಡದ ಜೀವನ, ಹಬ್ಬ ಹಾಗೂ ಸಂಸ್ಕೃತಿಯ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಸಂಕಲ್ಪ ಸೇವಾ ಸಂಸ್ಥೆ ವತಿಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಒಳಗೊಂಡ ಉತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಜೀವನ ಹಬ್ಬ-ಸಂಸ್ಕೃತಿ ಸುಗ್ಗಿ’ ಎಂಬ ಧ್ಯೇಯವಾಕ್ಯದಡಿ ಸಂಸ್ಥೆಯ 40ನೇ ವರ್ಷದ ಸಂಕಲ್ಪ ಉತ್ಸವ ನ.1ರಿಂದ 5ರವರೆಗೆ ನಡೆಯಲಿದೆ. ನ.1ರಂದು ಸಂಜೆ 5.30ಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಉತ್ಸವ ಉದ್ಘಾಟಿಸಲಿದ್ದು, ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು, ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ, ಬಾರಕೂರಿನ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರು ಹಾಗೂ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ. ನ.5ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ ಎಂದರು.
ಕವಿ ಹಾಗೂ ಪತ್ರಕರ್ತ ಸುಬ್ರಾಯ ಬಿದ್ರೆಮನೆ ಅವರ ‘ಹೊಸ ಭಾವದ ತೇರು’ ಕೃತಿ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಪತ್ರಕರ್ತ ಕೆ ಎಸ್ ಭಟ್ ಆನಗೋಡ, ಶ್ರೀಧರ ಅಣಲಗಾರ, ನಾಗರಾಜ ಮದ್ಗುಣಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದಾಧನೆಗೈದ ಹಲವು ಸಾಧಕರಿಗೆ ಸನ್ಮಾನ ನಡೆಯಲಿದೆ. ಕೃಷಿ, ಸಾಮಾಜಿಕ ಸೇವೆ, ಶಿಕ್ಷಣ, ಕಲೆ, ನ್ಯಾಯಾಂಗ, ಆರೋಗ್ಯ, ಸಂಘಟನೆ, ಪತ್ರಿಕೋದ್ಯಮ, ಸಹಕಾರ ಹಾಗೂ ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಮಂದಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಸ್ವದೇಶಿ ಗೋ ಸಂಕಲ್ಪ ಉತ್ಸವವೂ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10.30ಕ್ಕೆ ಸ್ವದೇಶಿ ಗೋವುಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಪ್ರತಿದಿನದ ಕಾರ್ಯಕ್ರಮಗಳು ಗೀತಾಜ್ಞಾನ ಯಜ್ಞ ತಂಡದವರ ಭಗವದ್ಗೀತಾ ಪಠಣದೊಂದಿಗೆ ಆರಂಭವಾಗಲಿವೆ. ಭಜನೆ, ತಾಳಮದ್ದಲೆ, ಗಾನ ವೈಭವ, ಯಕ್ಷಗಾನ, ಸಿತಾರ್ ವಾದನ, ಗಾಯನ, ಭರತನಾಟ್ಯ ಹಾಗೂ ಪೌರಾಣಿಕ ನಾಟಕ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಸ್ತುತಗೊಳ್ಳಲಿವೆ ಎಂದರು.
ಹಿರಿಯ ಕಲಾವಿದ ಸಿ.ಜಿ. ಹೆಗಡೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಸಂದರ್ಭವಾಗಿರುವ ಹಿನ್ನೆಲೆಯಲ್ಲಿ ಉತ್ಸವದ ಪ್ರತಿದಿನ ನುಡಿನಮನ ಸಲ್ಲಿಸುವ ಮೂಲಕ ಅವರ ಸಂಸ್ಮರಣೆ ನಡೆಯಲಿದೆ ಎಂದರು.
ಸಂಕಲ್ಪ ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ ಹೆಗಡೆ, ಸದಸ್ಯರಾದ ಬಾಬು ಬಾಂದೇಕರ್, ಶ್ರೀಪಾದ ಭಟ್ಟ, ಗೋಪಾಲಕೃಷ್ಣ ಭಟ್ಟ ತಾರೀಮಕ್ಕಿ, ನರಸಿಂಹ ಭಟ್ಟ, ಪ್ರದೀಪ ಯಲ್ಲಾಪುರಕರ್, ರವಿ ದೇವಡಿಗ, ಶಿವು ಆಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.















Leave a Reply