ವಿದ್ಯಾರ್ಥಿಗಳಿಗೆ ಪೂರೈಸಿದ ಚಪ್ಪಲಿ ಕಳಪೆ ಗುಣಮಟ್ಟ: ಉತ್ತಮ ಗುಣಮಟ್ಟದ ಚಪ್ಪಲಿ ನೀಡಲು ಆಗ್ರಹ

ಹಂಚಿಕೊಳ್ಳಿ

ಅಂಕೋಲಾ : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪೂರೈಸಲಾಗಿರುವ ಚಪ್ಪಲಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ವಿದ್ಯಾರ್ಥಿಗಳ ಬಳಕೆಗೆ ಸೂಕ್ತವಾಗಿಲ್ಲ ಎಂದು ಕಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನಕ್ಕೆ ಅನುಗುಣವಾಗಿ ಗುಣಮಟ್ಟದ ಚಪ್ಪಲಿಗಳನ್ನು ಪೂರೈಸಬೇಕಾಗಿದ್ದರೂ, ಪ್ರಸ್ತುತ ನೀಡಲಾಗಿರುವ ಚಪ್ಪಲಿಗಳು ಕೆಲವೇ ದಿನಗಳ ಬಳಕೆಯಲ್ಲೇ ಹಾಳಾಗುವ ರೀತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆ ಮಾಡಿರುವಂತೆ ಕಂಡುಬರುತ್ತಿದ್ದು, ಚಪ್ಪಲಿಗಳ ಮೇಲೆ ಪ್ರಮಾಣಿತ ಐಎಸ್‌ಐ ಗುರುತು ಕೂಡ ಕಂಡುಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇಂತಹ ಗುಣಮಟ್ಟದ ಚಪ್ಪಲಿಗಳನ್ನು ವಿದ್ಯಾರ್ಥಿಗಳು ಬಳಸುವುದರಿಂದ ಕಾಲಿಗೆ ಸೋಂಕು ಸೇರಿದಂತೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ಬಳಕೆಗೆ ಅಗತ್ಯವಿರುವ ಗುಣಮಟ್ಟವನ್ನು ಪರಿಗಣಿಸದೆ ಚಪ್ಪಲಿಗಳನ್ನು ಪೂರೈಸಿರುವುದಕ್ಕೆ ಸಂಬಂಧಿಸಿದ ಇಲಾಖೆಯವರು ಹಾಗೂ ಪೂರೈಕೆದಾರರು ಜವಾಬ್ದಾರಿ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ಮಕ್ಕಳಿಗೆ ನೀಡಲಾಗುವ ವಸ್ತುಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕೂಡಲೇ ಕಳಪೆ ಗುಣಮಟ್ಟದ ಚಪ್ಪಲಿಗಳನ್ನು ವಾಪಸ್ ಪಡೆದು, ಉತ್ತಮ ಗುಣಮಟ್ಟದ ಚಪ್ಪಲಿಗಳನ್ನು ಪೂರೈಸಬೇಕು. ಇಲ್ಲವಾದಲ್ಲಿ ಈ ವಿಚಾರವಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು” ಎಂದು ಶಾಲಾ ಅಧ್ಯಕ್ಷ ವಿ.ಎಸ್. ಭಟ್ಟ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಬೀರ ಗೌಡ, ಉಮೇಶ್ ಗೌಡ, ಪಾರ್ವತಿ ಪೆಡ್ನೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *