
ಯಲ್ಲಾಪುರ: ತೋಟದಲ್ಲಿ ಮೇವು ಕತ್ತರಿಸುತ್ತಿದ್ದ ವೇಳೆ ಏಕಾಏಕಿ ಹೆಸ್ಕಾಂ ಇಲಾಖೆಯ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಕೂಲಿ ಕಾರ್ಮಿಕನೊಬ್ಬ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಗಾರದಲ್ಲಿ ಸೋಮವಾರ ಸಂಜೆ ನಡೆದಿದೆ.
ತಾರಗಾರ ಗ್ರಾಮದ ರಾಮಚಂದ್ರ ಭಟ್ ಅವರ ತೋಟದ ಮಧ್ಯಭಾಗದಲ್ಲಿ ಹೆಸ್ಕಾಂ ಇಲಾಖೆಯ ವಿದ್ಯುತ್ ಲೈನ್ ಹಾದು ಹೋಗಿದೆ. ಸೋಮವಾರ ಸಂಜೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೇವು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ. ತಂತಿ ಬೀಳುವುದನ್ನು ಗಮನಿಸಿದ ಕಾರ್ಮಿಕ ಕೂಡಲೇ ಅಲ್ಲಿಂದ ದೂರ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಣ್ಣ ಪ್ರಮಾಣದ ಅಜಾಗರೂಕತೆ ಅಥವಾ ಮೈಮರೆವು ಸಂಭವಿಸಿದ್ದರೂ ವ್ಯಕ್ತಿಯೊಬ್ಬರ ಪ್ರಾಣಕ್ಕೆ ಕುತ್ತು ಬರುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವರ್ಷಕ್ಕೆ ಹಲವು ಬಾರಿ ತಂತಿ ತುಂಡಾಗುವ ಆರೋಪ
ಈ ಭಾಗದಲ್ಲಿ ಸುಮಾರು ಎರಡು-ಮೂರು ದಶಕದ ಹಿಂದೆ ವಿದ್ಯುತ್ ಲೈನ್ ಅಳವಡಿಸಲಾಗಿದ್ದು, ಕಳೆದ ಹಲವು ವರ್ಷಗಳಿಂದ ವರ್ಷಕ್ಕೆ 5–6 ಬಾರಿ ವಿದ್ಯುತ್ ತಂತಿ ತುಂಡಾಗಿ ಬೀಳುವ ಘಟನೆಗಳು ನಡೆಯುತ್ತಿವೆ. ತುಂಡಾದ ತಂತಿಯನ್ನು ಹೆಸ್ಕಾಂ ನವರು ಬಂದು ಜೋಡಿಸಿ ಹೋಗುತ್ತಾರೆ ಎಂದು ತೋಟದ ಮಾಲೀಕರು ಆರೋಪಿಸಿದ್ದಾರೆ. ವಿದ್ಯುತ್ ಲೈನ್ ತೋಟದ ಮಧ್ಯಭಾಗದಲ್ಲಿಯೇ ಹಾದು ಹೋಗಿರುವುದರಿಂದ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಸದಾ ಆತಂಕದಲ್ಲೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
“ನಮ್ಮ ತೋಟದ ಮಧ್ಯದಿಂದ ವಿದ್ಯುತ್ ಲೈನ್ ಹಾದು ಹೋಗಿರುವುದರಿಂದ ಯಾವ ಸಂದರ್ಭದಲ್ಲಿ ತಂತಿ ತುಂಡಾಗಿ ಕಾರ್ಮಿಕರ ಮೇಲೆ ಬೀಳುತ್ತದೆಯೋ ಎಂಬ ಭಯದಲ್ಲೇ ಕೆಲಸ ಮಾಡಬೇಕಾಗಿದೆ. ತಂತಿ ಲೈನ್ ಅನ್ನು ತೋಟದ ಹೊರಭಾಗದಿಂದ ತೆಗೆದುಕೊಂಡು ಹೋಗುವ ಅವಕಾಶವಿದ್ದರೂ ತೋಟದ ಮಧ್ಯಭಾಗದಿಂದಲೇ ಹಾದು ಹೋಗಲಾಗಿದೆ. ಇದನ್ನು ತೋಟದ ಹೊರಭಾಗಕ್ಕೆ ಸ್ಥಳಾಂತರಿಸಬೇಕು” ಎಂದು ತೋಟದ ಮಾಲೀಕ ರಾಮಚಂದ್ರ ಭಟ್ ಆಗ್ರಹಿಸಿದ್ದಾರೆ.
ಈ ಹಿಂದೆಯೂ ಹಳ್ಳಿನ್ಯೂಸ್ ವರದಿ
ಇದೇ ಗ್ರಾಮದಲ್ಲಿ ವಿದ್ಯುತ್ ತಂತಿಗಳ ಅವ್ಯವಸ್ಥೆ ಹಾಗೂ ಅಪಾಯದ ಕುರಿತು ಹಳ್ಳಿನ್ಯೂಸ್ ಈ ಹಿಂದೆಯೇ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಕುರಿತು ಪ್ರಶ್ನಿಸಿದಾಗ ಅಲ್ಲಿ ಹೊಸ ತಂತಿ ಲೈನ್ ಅಳವಡಿಸಲು ಹಲವು ಬಾರಿ ಇಲಾಖೆಯ ಅಧಿಕಾರಿಗಳೆ ವಿನಂತಿಸಿದರು ಇದುವರೆಗೂ ಜಾರಿಯಾಗಿಲ್ಲ . ಇದೀಗ ಮತ್ತೆ ಅದೇ ಪ್ರದೇಶದಲ್ಲಿ ವಿದ್ಯುತ್ ತಂತಿ ತುಂಡಾಗಿ ಬೀಳುವ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಪ್ರಾಣಾಪಾಯ ಸಂಭವಿಸುವ ಮುನ್ನವೇ ಹೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿ, ಸುರಕ್ಷಿತವಾಗಿ ಹೊಸ ತಂತಿ ಅಳವಡಿಸಬೇಕು. ತೋಟದ ಮಧ್ಯಭಾಗದಿಂದ ಹಾದು ಹೋಗಿರುವ ವಿದ್ಯುತ್ ಲೈನ್ ಅನ್ನು ತೋಟದ ಹೊರಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.














Leave a Reply