ಬಡತನದ ನಡುವೆಯೂ ಯೋಗದಲ್ಲಿ ಸಾಧನೆ: ಗಣೇಶ ನಾಯ್ಕಗೆ ಅನಂತಮೂರ್ತಿ ಹೆಗಡೆ ತಂಡದ ಸನ್ಮಾನ

ಹಂಚಿಕೊಳ್ಳಿ

ಶಿರಸಿ: ಜೀವನ ನಿರ್ವಹಣೆಗಾಗಿ ತಂದೆಯೊಂದಿಗೆ ಸೆಂಟ್ರಿಂಗ್ ಕೆಲಸ ಮಾಡುತ್ತಲೇ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ತಾಲೂಕಿನ ಕಬ್ಬೆ (ಉಂಚಳ್ಳಿ) ಗ್ರಾಮದ ಗಣೇಶ ವಿಷ್ಣು ನಾಯ್ಕ ಇದೀಗ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಇತ್ತೀಚೆಗೆ ತುಮಕೂರಿನಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಗಣೇಶ ನಾಯ್ಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಾಧನೆಯ ಆಧಾರದ ಮೇಲೆ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಇಂಡೋ–ಥೈಲ್ಯಾಂಡ್ ವರ್ಲ್ಡ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ದೊರೆತಿದೆ.

ಗಣೇಶ ನಾಯ್ಕ ಅವರ ಸಾಧನೆಯನ್ನು ಗುರುತಿಸಿದ ಬನವಾಸಿ ಬಿಜೆಪಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರ ತಂಡ ಸನ್ಮಾನಿಸಿ ಗೌರವಿಸುವುದರ ಜೊತೆಗೆ ಸ್ಪರ್ಧೆಗೆ ನೆರವಾಗುವ ಉದ್ದೇಶದಿಂದ ಆರ್ಥಿಕ ಸಹಾಯವನ್ನೂ ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, “ಆರ್ಥಿಕ ಸಂಕಷ್ಟದ ನಡುವೆಯೂ ಗಣೇಶ ಅವರು ಯೋಗದಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಶ್ಲಾಘನೀಯ. ಕುಟುಂಬದ ಜೀವನ ನಿರ್ವಹಣೆಗಾಗಿ ತಂದೆಯೊಂದಿಗೆ ಸೆಂಟ್ರಿಂಗ್ ಕೆಲಸ ಮಾಡುತ್ತಾ, ಯೋಗದಲ್ಲಿಯೂ ಸಾಧನೆ ಮಾಡಿರುವುದು ಯುವಜನತೆಗೆ ಪ್ರೇರಣೆಯಾಗಿದೆ. ಇದೀಗ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಅವರು ತಲುಪಿರುವುದು ಹೆಮ್ಮೆಯ ಸಂಗತಿ” ಎಂದರು.

ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿರತೆಗೂ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ದಿನನಿತ್ಯ ಬೆಳಿಗ್ಗೆ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು. ಯೋಗದ ಮಹತ್ವವನ್ನು ವಿಶ್ವದಾದ್ಯಂತ ಪರಿಚಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳು ಪ್ರಮುಖವಾಗಿವೆ ಎಂದು ಅವರು ಹೇಳಿದರು.

ಬನವಾಸಿ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಭಾರತದಲ್ಲಿ ಪುರಾತನ ಕಾಲದಿಂದಲೂ ಯೋಗಕ್ಕೆ ವಿಶೇಷ ಸ್ಥಾನವಿದೆ. ಇಂದು ಯೋಗ ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿದ್ದು, ಗಣೇಶ ನಾಯ್ಕ ಅವರಂತಹ ಗ್ರಾಮೀಣ ಪ್ರತಿಭೆಗಳು ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕೋರ್ ಕಮಿಟಿ ಸದಸ್ಯ ವಿ.ಎಂ. ಹೆಗಡೆ ಕಬ್ಬೆ, ಉಂಚಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕಬ್ಬೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಮರಿಗುಡ್ಡೆ, ವಾಮನ ನಾಯ್ಕ ಕಾನ್‌ಕೋಪ್ಪ, ಮಂಜುನಾಥ ನಾಯ್ಕ ಹಲಸಿನಕೊಪ್ಪ, ಹರೀಶ ನಾಯ್ಕ, ಕುಬೇರ ಗೌಡ, ಮಂಜುನಾಥ ರಾಮಗೌಡ, ಚಂದ್ರು ನಾಯ್ಕ, ಬಸವಂತ ಗಂಗೆಮತ್ತ್, ದೇವಕಿ ಅಣ್ಣಪ್ಪ ಗೌಡ ಸೇರಿದಂತೆ ಹಲವು ಮಹಿಳಾ ನಾಯಕಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *