ಶಿರಸಿ: ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಭೈರುಂಬೆ ಮುಖ್ಯರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನೀರು ನಿಂತು ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆ ಬಂದಾಗ ರಸ್ತೆ ಎರಡೂ ಬದಿಯಲ್ಲಿ ನೀರು ಸಂಗ್ರಹವಾಗುತ್ತಿದ್ದು, ವಾಹನಗಳು ಸಂಚರಿಸುವ ವೇಳೆ ಪಾದಚಾರಿಗಳ ಮೇಲೆ ನೀರು ಚಿಮ್ಮಿ ನಿತ್ಯ ಸಂಚಾರವೇ ದುಸ್ತರವಾಗುತ್ತಿದೆ.
ಭೈರುಂಬೆ ಗ್ರಾಮವು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕೇಂದ್ರವಾಗಿದ್ದು, ಇಲ್ಲಿ ಹೈಸ್ಕೂಲ್, ಗ್ರಾಪಂ, ಬ್ಯಾಂಕ್, ಅಂಚೆ ಕಚೇರಿ, ಕಂದಾಯ ಇಲಾಖೆ ಕಚೇರಿ, ಸಹಕಾರ ಸಂಘ ಸೇರಿದಂತೆ ಹಲವು ಸರ್ಕಾರಿ ಮತ್ತು ಸಾರ್ವಜನಿಕ ಸೇವಾ ಸಂಸ್ಥೆಗಳಿವೆ. ಪ್ರತಿದಿನ ವಿದ್ಯಾರ್ಥಿಗಳು, ರೈತರು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿವಿಧ ಕೆಲಸಗಳಿಗಾಗಿ ಆಗಮಿಸುವ ನೂರಾರು ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನೀರು ನಿಂತು ಕೆಸರಿನ ವಾತಾವರಣ ನಿರ್ಮಾಣವಾಗುವುದರಿಂದ ಸಾರ್ವಜನಿಕರು ಜೀವಭಯದಲ್ಲೇ ರಸ್ತೆ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಎರಡೂ ದಿಕ್ಕಿನಿಂದ ವಾಹನಗಳು ಒಂದೇ ವೇಳೆ ಬಂದಾಗ ಪಾದಚಾರಿಗಳಿಗೆ ಬದಿಗೆ ಸರಿಯಲು ಅವಕಾಶವಿಲ್ಲದೆ, ವಾಹನಗಳಿಂದ ನೀರು ಚಿಮ್ಮಿ ಬಟ್ಟೆ ಒದ್ದೆಯಾಗುವುದು, ಕೆಸರು ಎರಚಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ವಾಹನಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಕುರಿತು ಭೈರುಂಬೆ ಗ್ರಾಪಂದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸುವಂತೆ ವಿನಂತಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಬೇಕು. ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಸಂಪೂರ್ಣ ಮಾರ್ಗವನ್ನು ಪರಿಶೀಲಿಸಿ ಇಂತಹ ಸಮಸ್ಯೆ ಇರುವ ಸ್ಥಳಗಳಲ್ಲಿಯೂ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
—————————————————————-
ಶಿರಸಿ-ಯಲ್ಲಾಪುರ ರಸ್ತೆಯ ಭೈರುಂಬೆ ಬಳಿ ಚರಂಡಿ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ನೀರು ನಿಂತು ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾಮಗಾರಿಯನ್ನು ಗ್ರಾಪಂದಿಂದ ಕೈಗೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಅನುದಾನದ ಅಗತ್ಯವಿರುವುದರಿಂದ ಈ ಹಿಂದೆ ಪಿಡಬ್ಲ್ಯುಡಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ಪ್ರಕಾಶ ಹೆಗಡೆ, (ಭೈರುಂಬೆ ಗ್ರಾಪಂ ಮಾಜಿ ಸದಸ್ಯ)




Leave a Reply