ಮಾಜಿ ಸಚಿವ Zameer Ahmed Khanಗೆ ಲೋಕಾ ಕಂಟಕ: ಆದಾಯಕ್ಕಿಂತ 60% ಅಕ್ರಮ ಆಸ್ತಿ ಪತ್ತೆ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ!

ಹಂಚಿಕೊಳ್ಳಿ

ಬೆಂಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತದಿಂದ ತೀವ್ರ ಸಂಕಷ್ಟ ಎದುರಾಗಿದೆ. ಜಮೀರ್ ಅಹ್ಮದ್ ಖಾನ್ ಹೊಂದಿರುವ ಆಸ್ತಿಯು ಅವರ ಅಧಿಕೃತ ಆದಾಯದ ಮೂಲಗಳಿಗಿಂತ ಬರೋಬ್ಬರಿ 60% ರಷ್ಟು ಹೆಚ್ಚಿರುವುದು ಲೋಕಾಯುಕ್ತ ಪೊಲೀಸರ ಸುದೀರ್ಘ ತನಿಖೆಯಿಂದ ಬೆಳಕಿಗೆ ಬಂದಿದೆ. 

ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನ್ಯಾಯಾಲಯಕ್ಕೆ ಅಧಿಕೃತ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲು ಮುಂದಾಗಿರುವ ಲೋಕಾಯುಕ್ತ ಅಧಿಕಾರಿಗಳು, ಜಮೀರ್ ವಿರುದ್ಧ ಪ್ರಾಸಿಕ್ಯೂಷನ್ ನಡಾವಳಿಗಳನ್ನು ಕೈಗೊಳ್ಳಲು ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಈ ಪ್ರಕರಣದ ಇತಿಹಾಸವು 2018 ರ ಬಹುಕೋಟಿ ಐಎಂಎ (IMA) ಜ್ಯುವೆಲ್ಲರಿ ಕಂಪನಿಯ ವಂಚನೆ ಹಗರಣಕ್ಕೆ ಸಂಬಂಧಿಸಿದೆ. ಈ ವಂಚನೆ ತನಿಖೆಯ ಭಾಗವಾಗಿ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಭರ್ಜರಿ ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಜಮೀರ್ ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದ ಇಡಿ ಅಧಿಕಾರಿಗಳು, ಈ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ಶಿಫಾರಸು ಮಾಡಿದ್ದರು. ಆ ನಂತರ ರಾಜ್ಯದಲ್ಲಿ ಎಸಿಬಿ ರದ್ದಾದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡು ಮುಂದುವರಿಸಿದ್ದರು.

ಲೋಕಾಯುಕ್ತ ಪೊಲೀಸರು ನಡೆಸಿದ ಸತತ ಪರಿಶೀಲನೆ ಹಾಗೂ ತನಿಖೆಯ ವೇಳೆ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಕಾನೂನುಬದ್ಧ ಆದಾಯದ ಮಿತಿಗಿಂತ 60% ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿರುವುದು ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ. ಸದ್ಯ ತನಿಖೆಯನ್ನು ಪೂರ್ಣಗೊಳಿಸಿರುವ ಲೋಕಾಯುಕ್ತ ಸಂಸ್ಥೆಯು ಆರೋಪಿ ವಿರುದ್ಧ ಕಾನೂನು ಸಮರ ತೀವ್ರಗೊಳಿಸಲು ಸಜ್ಜಾಗಿದ್ದು, ಇದೀಗ ರಾಜ್ಯಪಾಲರ ಅಂಗಳ ತಲುಪಿರುವ ಪ್ರಾಸಿಕ್ಯೂಷನ್ ಅನುಮತಿಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

Leave a Reply

Your email address will not be published. Required fields are marked *

Advertisement


This will close in 3 seconds