ಬೆಂಗಳೂರು ಹೊರವಲಯದ ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ 1 ಕೋಟಿ 79 ಲಕ್ಷ ರೂಪಾಯಿ ಭಾರಿ ಮೊತ್ತದ ಹಣವಿದ್ದ ಎಟಿಎಂ ವಾಹನವನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಎಟಿಎಂಗಳಿಗೆ ಹಣ ತುಂಬಲು ಬಂದಿದ್ದ ವಾಹನವನ್ನು ಅಡ್ಡಗಟ್ಟಿದ ಕಿಡಿಗೇಡಿಗಳ ಗುಂಪೊಂದು, ಬೈಕ್‌ಗೆ ವಾಹನ ತಾಗಿದೆ ಎಂದು ವಿನಾಕಾರಣ ಕ್ಯಾತೆ ತೆಗೆದು ನಡುರಸ್ತೆಯಲ್ಲೇ ರಂಪಾಟ ಮಾಡಿದೆ. ತದನಂತರ ಸಾರ್ವಜನಿಕರು ಸೇರುತ್ತಿದ್ದಂತೆ ವಾಹನದ ಕೀ ಕಸಿದುಕೊಂಡು ಪರಾರಿಯಾಗಿದೆ. ಈ ಆತಂಕಕಾರಿ ಘಟನೆಯು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಿರಾತಕರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಬುಧವಾರ ರಾತ್ರಿ ಎಟಿಎಂ ವಾಹನದಲ್ಲಿ ಓರ್ವ ಗನ್‌ಮ್ಯಾನ್, ಡ್ರೈವರ್ ಹಾಗೂ ಮತ್ತೋರ್ವ ಸಿಬ್ಬಂದಿ ಭಾರಿ ಮೊತ್ತದ ಹಣದೊಂದಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ವಾಹನವು ಯೂಟರ್ನ್ ತೆಗೆದುಕೊಳ್ಳುವಾಗ ಏಕಾಏಕಿ ಪ್ರತ್ಯಕ್ಷರಾದ ದುಷ್ಕರ್ಮಿಗಳು, ತಮ್ಮ ಬೈಕ್‌ಗೆ ವಾಹನ ಟಚ್ ಆಗಿದೆ ಎಂದು ಆರೋಪಿಸಿ ವಾಹನವನ್ನು ನಿಲ್ಲಿಸಿ ಅವಾಜ್ ಹಾಕಿದ್ದಾರೆ. ಇವರ ಅನುಮಾನಾಸ್ಪದ ವರ್ತನೆ ಹಾಗೂ ಗಲಾಟೆಯಿಂದಾಗಿ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಲು ಆರಂಭಿಸಿದ್ದಾರೆ. ಜನರು ಸೇರುತ್ತಿರುವುದನ್ನು ಕಂಡು ಗಾಬರಿಗೊಂಡ ಆಸಾಮಿಗಳು, ಕ್ಷಣಾರ್ಧದಲ್ಲಿ ಎಟಿಎಂ ವಾಹನದ ಕೀಯನ್ನು ಕಸಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಮಧ್ಯರಾತ್ರಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಈ ಕಿರಾತಕರ ಗ್ಯಾಂಗ್, ಎಟಿಎಂ ವಾಹನದಲ್ಲಿದ್ದ ಕೋಟ್ಯಂತರ ರೂಪಾಯಿ ಹಣವನ್ನು ದೋಚುವ ಉದ್ದೇಶದಿಂದಲೇ ಈ ಅಪಘಾತದ ನಾಟಕವಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಸಾರ್ವಜನಿಕರು ಸಕಾಲದಲ್ಲಿ ಸೇರದೇ ಇದ್ದಿದ್ದರೆ ಕೋಟ್ಯಂತರ ರೂಪಾಯಿ ದರೋಡೆಯಾಗುವ ಸಾಧ್ಯತೆಯಿತ್ತು. ಎಟಿಎಂ ವಾಹನದ ಕೀ ಕದ್ದೊಯ್ದು ದುಷ್ಕೃತ್ಯ ಎಸಗಲು ಹೊಂಚು ಹಾಕಿದ್ದ ಈ ಖದೀಮರ ಪತ್ತೆಗಾಗಿ ಪೊಲೀಸರು ಇದೀಗ ಬಲೆಬೀಸಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


Leave a Reply