Petrol ಬಂಕ್ ಎದುರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಕಾರು, ಪರಾರಿಯಾದ ಚಾಲಕ!

ಹಂಚಿಕೊಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರದ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನೆಲಮಂಗಲ ಕಡೆಯಿಂದ ದೊಡ್ಡಬಳ್ಳಾಪುರದತ್ತ ಅತಿವೇಗವಾಗಿ ಬರುತ್ತಿದ್ದ ಕಾರೊಂದು ತಿರುವಿನಲ್ಲಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ಅತಿವೇಗದಲ್ಲಿದ್ದ ಕಾರು ನೇರವಾಗಿ ರಸ್ತೆ ಬದಿಯಿದ್ದ ಎರಡು ವಿದ್ಯುತ್ ಕಂಬಗಳಿಗೆ ಭೀಕರವಾಗಿ ಅಪ್ಪಳಿಸಿದೆ. ಕಾರು ಅಪ್ಪಳಿಸಿದ ರಭಸಕ್ಕೆ ಕಂಬಗಳು ಮುರಿದುಬಿದ್ದಿದ್ದು, ಈ ಭಯಾನಕ ಅಪಘಾತದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

ಜಖಂಗೊಂಡ ಕಾರು ಬಿಟ್ಟು ಚಾಲಕ ಎಸ್ಕೇಪ್

ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಯಾರಿಗೂ ಗಾಯಗಳಾದ ಬಗ್ಗೆಯೂ ವರದಿಯಾಗಿಲ್ಲ. ಅಪಘಾತ ಸಂಭವಿಸುತ್ತಿದ್ದಂತೆ ವಾಹನದಲ್ಲಿದ್ದ ಚಾಲಕ, ಜಖಂಗೊಂಡ ಕಾರನ್ನು ರಸ್ತೆಯಲ್ಲೇ ಅನಾಥವಾಗಿ ಬಿಟ್ಟು ಕಾಲ್ಕಿತ್ತಿದ್ದಾನೆ. ವಾಹನದ ಬಿಡಿಭಾಗಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ದೊಡ್ಡಬೆಳವಂಗಲ ಠಾಣೆ ಪೊಲೀಸರ ತನಿಖೆ

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ದೊಡ್ಡಬೆಳವಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಬಿಟ್ಟುಹೋಗಿರುವ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಮಾರ್ಗದಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಇಂತಹ ಅಪಘಾತಗಳು ಮರುಕಳಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ವಾಹನ ಮಾಲೀಕನ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds