ಬೆಂಗಳೂರು ನಗರದಲ್ಲಿ ಜಿಬಿಎ (GBA) ಅಧಿಕಾರಿಗಳು ಕೈಗೊಂಡಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗಿದೆ. ಆಪರೇಷನ್ ಫುಟ್‌ಪಾತ್ ಕಾರ್ಯಾಚರಣೆಯಿಂದಾಗಿ ಸಾವಿರಾರು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಸಂಕಟ ಎದುರಾಗಿದ್ದು, ಜಿಬಿಎ ಹಾಗೂ ಸರ್ಕಾರದ ನಡೆಯನ್ನು ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ.
ಹೂ, ಹಣ್ಣು, ತರಕಾರಿ ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ 5 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಒಗ್ಗೂಡಿ ಜಿಬಿಎ ಜೆಸಿಬಿ (JCB) ಆರ್ಭಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

2.5 ಲಕ್ಷ ವ್ಯಾಪಾರಿಗಳ ಜೀವನೋಪಾಯಕ್ಕೆ ಕುತ್ತು
ಕಳೆದ ಜುಲೈ 1ರಿಂದಲೇ ನಗರದಾದ್ಯಂತ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಜಿಬಿಎ ಬಿರುಸಿನಿಂದ ನಡೆಸುತ್ತಿದೆ. ಆದರೆ, ಬೆಂಗಳೂರು ನಗರದಲ್ಲಿ ಬರೋಬ್ಬರಿ 2.5 ಲಕ್ಷ ವ್ಯಾಪಾರಿಗಳು ಫುಟ್‌ಪಾತ್ ಮೇಲಿನ ವ್ಯಾಪಾರವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಏಕಾಏಕಿ ಈ ರೀತಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವುದರಿಂದ ಅವರ ದೈನಂದಿನ ಜೀವನೋಪಾಯಕ್ಕೆ ತೀವ್ರ ತೊಂದರೆಯಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯಬಾರದು ಹಾಗೂ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಕ್ಷಣವೇ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ತೀವ್ರಗೊಂಡಿದೆ.
ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದ ಜಿಬಿಎ
ಒಂದೆಡೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಜಿಬಿಎ ಅಧಿಕಾರಿಗಳು ಮಾತ್ರ ತಮ್ಮ ನಿಲುವಿಗೆ ಅಂಟಿ ಕುಳಿತಿದ್ದಾರೆ. ಯಾವುದೇ ಕಾರಣಕ್ಕೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಿಬಿಎ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಬರೋಬ್ಬರಿ 1500 ಕಿಲೋಮೀಟರ್‌ನಷ್ಟು ಫುಟ್‌ಪಾತ್ ಅಕ್ರಮವಾಗಿ ಒತ್ತುವರಿಯಾಗಿದೆ. ಸಾರ್ವಜನಿಕರ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ವ್ಯಾಪಾರಿಗಳ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಯ ನಡುವೆಯೂ ಆಪರೇಷನ್ ಫುಟ್‌ಪಾತ್ ಕಾರ್ಯಾಚರಣೆಯನ್ನು ಮುಂದುವರಿಸಲು ಜಿಬಿಎ ಮುಂದಾಗಿದೆ.


Leave a Reply