ಚಿತ್ರದುರ್ಗ: ಮಠದ ಪಕ್ಕದಲ್ಲಿನ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಮೀನು ಮಾಲೀಕರು ಐಮಂಗಲ ಹರಳಯ್ಯ ಮಠದ ಶ್ರೀಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಹರಳಯ್ಯ ಮಠದ ಬಳಿ ಈ ಅಹಿತಕರ ಘಟನೆ ನಡೆದಿದೆ.
ಆದಿರಾಳು ಗ್ರಾಮದ ಮೂಲದ ಆಕಾಶ್ ಸಿದ್ದೇಶ್ ಎಂಬುವವರು ಶ್ರೀಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಠದ ಪಕ್ಕದಲ್ಲಿರುವ ತಮ್ಮ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮಠದ ಪ್ರವೇಶ ದ್ವಾರವನ್ನು (ಬಾಗಿಲು) ಕಟ್ಟಿದ್ದಾರೆ ಎಂದು ಆರೋಪಿಸಿ ಜಮೀನು ಮಾಲೀಕರು ಜಗಳ ತೆಗೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಲಾಗಿದೆ.

ವಿವಾದದ ವೇಳೆ ಕೇವಲ ಶ್ರೀಗಳ ಮೇಲೆ ಮಾತ್ರವಲ್ಲದೆ, ಅವರನ್ನು ರಕ್ಷಿಸಲು ಮುಂದಾದ ಮಠದ ಕಾರು ಚಾಲಕ ಭೀಮರಾಜ್ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಜಗಳದಲ್ಲಿ ಗಾಯಗೊಂಡಿರುವ ಹರಳಯ್ಯ ಮಠದ ಶ್ರೀಗಳು ಹಾಗೂ ಡ್ರೈವರ್ ಭೀಮರಾಜ್ ಅವರನ್ನು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದಿರುವ ಈ ಹಲ್ಲೆ ಪ್ರಕರಣವು ಸ್ಥಳೀಯವಾಗಿ ಆತಂಕ ಮೂಡಿಸಿದೆ.


Leave a Reply