ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ, ಕೃಷ್ಣಾ ಸೇರಿ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ!

ಹಂಚಿಕೊಳ್ಳಿ

ಮಹಾರಾಷ್ಟ್ರದಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಬೆಳಗಾವಿ ಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ ಮತ್ತು ಘಟಪ್ರಭಾ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜಾಪುರ ಬ್ಯಾರೇಜ್‌ನ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಕೃಷ್ಣಾ ನದಿಗೆ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಬ್ಯಾರೇಜ್‌ನಿಂದ ಬಿಡುಗಡೆಯಾದ ಅಧಿಕ ಪ್ರಮಾಣದ ನೀರಿನಿಂದಾಗಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ಬೇಸಿಗೆಯಿಂದ ಎದುರಾಗಿದ್ದ ಕುಡಿಯುವ ನೀರಿನ ಆತಂಕ ಕೊನೆಗೂ ದೂರವಾಗಿದೆ.

ಹಿಡಕಲ್ ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಳ

ಮಹಾರಾಷ್ಟ್ರದ ಅಂಬೋಲಿ ಭಾಗದಲ್ಲಿಯೂ ವ್ಯಾಪಕ ಮಳೆಯಾಗುತ್ತಿದ್ದು, ಘಟಪ್ರಭಾ ನದಿಯ ಒಳಹರಿವಿನಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಹಿಡಕಲ್ ಜಲಾಶಯದ ನೀರಿನ ಮಟ್ಟದಲ್ಲಿ ಕೇವಲ ಒಂದೇ ದಿನದಲ್ಲಿ ಒಂದು ಅಡಿ ಹೆಚ್ಚಳವಾಗಿದೆ. ಜಲಾಶಯಕ್ಕೆ ಪ್ರಸ್ತುತ 1665 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 2175 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದ ನೀರಿನ ಮಟ್ಟ ಇದೀಗ 2092 ಅಡಿಗೆ ತಲುಪಿದೆ.

ಆದರೆ, ಮಲಪ್ರಭಾ ಜಲಾಶಯಕ್ಕೆ ಇದುವರೆಗೂ ಯಾವುದೇ ಒಳಹರಿವು ಆರಂಭವಾಗಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಶೀಘ್ರದಲ್ಲೇ ಜಲಾಶಯಕ್ಕೆ ಒಳಹರಿವು ಆರಂಭವಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ತುಂಬಿ ಹರಿಯುತ್ತಿರುವ ದೂಪದಾಳ ಜಲಾಶಯ

ಇನ್ನೊಂದೆಡೆ, ಹಿರಣ್ಯಕೇಶಿ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪರಿಣಾಮವಾಗಿ ಘಟಪ್ರಭಾ ಬಳಿಯಿರುವ ದೂಪದಾಳ ಜಲಾಶಯವು ಸಂಪೂರ್ಣವಾಗಿ ತುಂಬಿ ಹರಿಯಲಾರಂಭಿಸಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ಮತ್ತು ಜಲಾಶಯಗಳು ಭರ್ತಿಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದ್ದು, ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.

Leave a Reply

Your email address will not be published. Required fields are marked *

Advertisement


This will close in 3 seconds