ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಹಾಗೂ ಕಿರಿದಾದ ರಸ್ತೆಗಳ ನಡುವೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ರಾಜ್ಯ ಆರೋಗ್ಯ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದಲ್ಲಿ ಈ ಹಿಂದೆ ಸ್ಥಗಿತಗೊಂಡಿದ್ದ ‘ಬೈಕ್ ಆಂಬುಲೆನ್ಸ್’ ಸೇವೆಯನ್ನು ರಾಜಧಾನಿಯಲ್ಲಿ ಮತ್ತೆ ಆರಂಭಿಸಲು ಭರದ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ 100 ಹೊಸ ಬೈಕ್ ಆಂಬುಲೆನ್ಸ್ಗಳು ರಸ್ತೆಗಿಳಿಯಲಿವೆ. ಆರೋಗ್ಯ ಸಚಿವರ ನೇರ ಸೂಚನೆಯ ಮೇರೆಗೆ ಈ ಮಹತ್ವಾಕಾಂಕ್ಷಿ ಸೇವೆಗೆ ಮರುಜೀವ ನೀಡಲಾಗುತ್ತಿದೆ.
‘ಗೋಲ್ಡನ್ ಅವರ್’ನಲ್ಲಿ ಜೀವ ರಕ್ಷಣೆ ಗುರಿ
ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಸಾಮಾನ್ಯ ಆಂಬುಲೆನ್ಸ್ಗಳು ನಿಗದಿತ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಅಥವಾ ರೋಗಿಗಳ ಬಳಿ ತಲುಪಲು ಸಾಧ್ಯವಾಗುತ್ತಿಲ್ಲ. ಅಪಘಾತ ಅಥವಾ ಹೃದಯಾಘಾತದಂತಹ ತುರ್ತು ಸಂದರ್ಭದಲ್ಲಿ ‘ಗೋಲ್ಡನ್ ಅವರ್’ (Golden Hour) ರೋಗಿಯ ಪ್ರಾಣ ಉಳಿಸಲು ಅತ್ಯಂತ ನಿರ್ಣಾಯಕವಾಗಿರುತ್ತದೆ. ಇಂತಹ ಸಮಯದಲ್ಲಿ ಟ್ರಾಫಿಕ್ನಲ್ಲಿ ಸಿಲುಕದೆ, ನಗರದ ಕಿರಿದಾದ ರಸ್ತೆಗಳಲ್ಲೂ ಸುಲಭವಾಗಿ ಮತ್ತು ವೇಗವಾಗಿ ಚಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಬೈಕ್ ಆಂಬುಲೆನ್ಸ್ಗಳು ನೆರವಾಗಲಿವೆ. ರೋಗಿಗಳಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ನೀಡಿ, ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಸದುದ್ದೇಶವನ್ನು ಇಲಾಖೆ ಹೊಂದಿದೆ.
2015ರಲ್ಲೇ ಶುರುವಾಗಿತ್ತು ಈ ಸೇವೆ
ರಾಜಧಾನಿಯಲ್ಲಿ 2015ರಲ್ಲೇ ಮೊದಲ ಬಾರಿಗೆ 30 ಬೈಕ್ ಆಂಬುಲೆನ್ಸ್ಗಳ ಕಾರ್ಯಾಚರಣೆಯನ್ನು ಪರಿಚಯಿಸಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆಯ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಈ ಸೇವೆಯನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ನೆರೆಯ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬೈಕ್ ಆಂಬುಲೆನ್ಸ್ ಸೇವೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ, ಹಳೆಯ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ ಬೆಂಗಳೂರಿನಲ್ಲಿ ಮತ್ತೆ 100 ಬೈಕ್ ಆಂಬುಲೆನ್ಸ್ಗಳ ಮೂಲಕ ತ್ವರಿತ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಲು ಸರ್ಕಾರ ಬ್ಲೂಪ್ರಿಂಟ್ ಸಿದ್ಧಪಡಿಸಿದೆ.







Leave a Reply