Rajkot | 3 ದಿನದ ಕಾರ್ಯಾಚರಣೆಗೆ ಬರೋಬ್ಬರಿ 27.20 ಲಕ್ಷ ರೂ. ತಿಂಡಿ ಬಿಲ್: ಚಹಾ-ಕಾಫಿಗೇ 6 ಲಕ್ಷ ಖರ್ಚು!

ಹಂಚಿಕೊಳ್ಳಿ

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (RMC) ವ್ಯಾಪ್ತಿಯಲ್ಲಿ ನಡೆದ ಕೇವಲ 3 ದಿನಗಳ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯೊಂದರಲ್ಲಿ ಬರೋಬ್ಬರಿ 27.20 ಲಕ್ಷ ರೂಪಾಯಿಗಳ ಉಪಹಾರದ ಬಿಲ್ ಮಾಡಲಾಗಿದೆ. ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರು ಮತ್ತು ಪೊಲೀಸ್ ಸಿಬ್ಬಂದಿಗೆ ನೀಡಲಾದ ಆಹಾರ ಹಾಗೂ ಪಾನೀಯಗಳ ಈ ದುಬಾರಿ ವೆಚ್ಚವು ಇದೀಗ ಭಾರಿ ಹಗರಣದ ಸಂಶಯವನ್ನು ಹುಟ್ಟುಹಾಕಿದೆ. ಜಂಗ್ಲೇಶ್ವರ ಪ್ರದೇಶದ 8 ವಲಯಗಳಲ್ಲಿ ಇತ್ತೀಚೆಗೆ ಈ ತೆರವು ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಸಿಬ್ಬಂದಿಗೆ ಆರ್ಡರ್ ಮಾಡಲಾದ ತಿಂಡಿಗಳ ಬೆಲೆ ಕೇಳಿದರೆ ಭ್ರಷ್ಟಾಚಾರದ ವಾಸನೆ ಎದ್ದುಕಾಣುತ್ತದೆ.

ಈ ಕಾರ್ಯಾಚರಣೆಯ ವೇಳೆ ಕೇವಲ 150 ತಿಂಡಿ ತಟ್ಟೆಗಳಿಗೆ ಬರೋಬ್ಬರಿ 34,650 ರೂ. ಬಿಲ್ ಮಾಡಲಾಗಿದ್ದು, ಇನ್‌ವಾಯ್ಸ್‌ನಲ್ಲಿ ಕೇವಲ ಒಂದು ‘ಕಾಜು ಕಟ್ಲಿ’ಗೆ ತಲಾ 231 ರೂ. ದರ ನಿಗದಿಪಡಿಸಲಾಗಿದೆ. ಕಾರ್ಯಾಚರಣೆ ನೆಪದಲ್ಲಿ ನೌಕರರು ಗೋಡಂಬಿ, ಖರ್ಜೂರ, ಸಮೋಸಾ, ಜಿಲೇಬಿ ಮತ್ತು ಗಂಥಿಯಾದಂತಹ ದುಬಾರಿ ಸಿಹಿತಿಂಡಿಗಳನ್ನು ಸವಿದಿದ್ದಾರೆ. ಇದರಲ್ಲಿ ಕೇವಲ ಒಂದು ಪ್ರಸಿದ್ಧ ರೆಸ್ಟೋರೆಂಟ್‌ನ ಬಿಲ್ ಮಾತ್ರ ಸುಮಾರು 20 ಲಕ್ಷ ರೂಪಾಯಿ ಬಂದಿದೆ. 

ಇನ್ನು ಬಿಸಿಲಿನಲ್ಲಿ ಕೆಲಸ ಮಾಡಿದ ನೌಕರರು ಹಾಗೂ ಪೊಲೀಸರು ಕೇವಲ 3 ದಿನಗಳಲ್ಲಿ ‘ಆರಾಧನಾ ಟೀ ಸ್ಟಾಲ್’ ನಿಂದ ಬರೋಬ್ಬರಿ 21,000 ಕಪ್ ಚಹಾ-ಕಾಫಿ ಮತ್ತು 4,000 ಕ್ಕೂ ಹೆಚ್ಚು ಬಾಟಲಿ ನಿಂಬೆ ಪಾನಕ ಹಾಗೂ ಬಿಸ್ಕತ್ತುಗಳನ್ನು ತಿಂದಿದ್ದಾರೆ ಎಂದು ಬಿಲ್‌ನಲ್ಲಿ ತೋರಿಸಲಾಗಿದೆ. ಈ ಚಹಾ ಮತ್ತು ಕಾಫಿಯ ಒಟ್ಟು ವೆಚ್ಚವೇ ಸುಮಾರು 6 ಲಕ್ಷ ರೂಪಾಯಿಗಳಾಗಿದೆ.

ಮಾಜಿ ಪದಾಧಿಕಾರಿಗಳ ತಂಡವು ಮಂಜೂರಾತಿಗಾಗಿ ಸಲ್ಲಿಸಿದ ಈ 27.20 ಲಕ್ಷದ ಬೃಹತ್ ಇನ್‌ವಾಯ್ಸ್ ನಾಗರಿಕ ಆಡಳಿತದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರಲ್ಲಿ ಮೇಲ್ನೋಟಕ್ಕೇ ಭಾರಿ ವ್ಯತ್ಯಾಸಗಳು ಮತ್ತು ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್‌ಕೋಟ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಈ ಪ್ರಸ್ತಾವನೆಯನ್ನು ತಕ್ಷಣವೇ ತಡೆಹಿಡಿದಿದ್ದಾರೆ. ಈ ವೆಚ್ಚಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಬಿಲ್ಲಿಂಗ್‌ನ ನಿಖರತೆಯ ಬಗ್ಗೆ ಅಧಿಕೃತ ವಿವರಣೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮತ್ತೊಂದೆಡೆ, ಒತ್ತುವರಿ ತೆರವಿನ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದು, ಈ ಹಗಲು ದರೋಡೆಯ ಹಿಂದೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds