ಶಬರಿಮಲೆ ಯಾತ್ರೆ ಮುಗಿಸಿ ಮರಳುವಾಗ ಭೀಕರ ರಸ್ತೆ ಅಪಘಾತ: 28 ವರ್ಷದ ಯುವಕ ಸಾ*ವು!

ಹಂಚಿಕೊಳ್ಳಿ

ಕೊಡಗು: ಶಬರಿಮಲೆ (Sabarimala) ಯಾತ್ರೆ ಮುಗಿಸಿಕೊಂಡು ವೀರಾಜಪೇಟೆ ಮಾರ್ಗವಾಗಿ ರಾಜಧಾನಿ ಬೆಂಗಳೂರಿಗೆ ವಾಪಸ್ ಹೊರಟಿದ್ದ ಅಯ್ಯಪ್ಪ ಭಕ್ತರ ಕಾರಿಗೆ ಟಿಪ್ಪರ್ ಲಾರಿಯೊಂದು ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಬೆಂಗಳೂರಿನ ಯುವಕನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಪೆರುಂಬಾಡಿ ಚೆಕ್ ಪೋಸ್ಟ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನ ಎಸ್.ಆರ್.ನಗರ ನಿವಾಸಿಯಾದ ರೋಹಿತ್ (28) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯುವಕ. ರೋಹಿತ್ ಅವರು ತಮ್ಮ ಸ್ನೇಹಿತರೊಂದಿಗೆ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿಕೊಂಡು ವೀರಾಜಪೇಟೆ ಮಾರ್ಗವಾಗಿ ಬೆಂಗಳೂರಿಗೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಪೆರುಂಬಾಡಿ ಚೆಕ್ ಪೋಸ್ಟ್ ಸಮೀಪಿಸುತ್ತಿದ್ದಂತೆ ಎದುರಿನಿಂದ ಬಂದ ವೇಗದ ಟಿಪ್ಪರ್ ಲಾರಿ ಹಾಗೂ ಇವರ ಕಾರಿನ ನಡುವೆ ಭೀಕರ ಅಪಘಾತ ನಡೆದಿದೆ.

: ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ರೋಹಿತ್ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಇನ್ನು ಕಾರಿನಲ್ಲಿದ್ದ ರೋಹಿತ್ ಅವರ ಜೊತೆಗಿದ್ದ ಇಬ್ಬರು ಸ್ನೇಹಿತರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ತನಿಖೆಯನ್ನು ಮುಂದುವರಿಸಿದ್ದಾರೆ. ಯಾತ್ರೆ ಮುಗಿಸಿ ಮನೆಗೆ ಮರಳಬೇಕಿದ್ದ ಯುವಕ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಅವರ ಕುಟುಂಬದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

Leave a Reply

Your email address will not be published. Required fields are marked *

Advertisement


This will close in 3 seconds