ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಸುದೀರ್ಘ ಅವಧಿಯಿಂದ ಬಾಕಿ ಉಳಿದಿದ್ದ ಮುಂಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಕರ್ನಾಟಕ ಸರ್ಕಾರವು ಉಳಿಕೆ ಮೂಲ ವೃಂದದ ನೂರಾರು ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಸ್ಥಾನಪನ್ನ ಮುಂಬಡ್ತಿ ನೀಡಿ ಮಹತ್ವದ ಅಧಿಕೃತ ಆದೇಶ ಹೊರಡಿಸಿದೆ.
ಮೂರು ಹಂತಗಳಲ್ಲಿ ಮುಂಬಡ್ತಿ ಆದೇಶ: ಸರ್ಕಾರದ ಕಂದಾಯ ಇಲಾಖೆಯ (ಸೇವೆಗಳು-3) ಅಧೀನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಜಿ.ಕೆ. ಅವರು ಹೊರಡಿಸಿರುವ ಈ ಅಧಿಸೂಚನೆಯಲ್ಲಿ ಅಧಿಕಾರಿಗಳಿಗೆ ಮೂರು ಪ್ರತ್ಯೇಕ ಹಂತಗಳಲ್ಲಿ ಮುಂಬಡ್ತಿ ಕಲ್ಪಿಸಲಾಗಿದೆ.

-
ದೋಷಮುಕ್ತ ಅಧಿಕಾರಿಗಳಿಗೆ ಪೂರ್ವಾನ್ವಯ ಮುಂಬಡ್ತಿ: ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಸಂಪೂರ್ಣ ದೋಷಮುಕ್ತರಾದ ಸಿ ಕೆ ನಾಯ್ಕ (ಬ್ಯಾಡಗಿ), ಬಿ.ಗಿರಿಜಾ (ಚಾಮರಾಜನಗರ) ಮತ್ತು ವೈ.ಎಂ. ರೇಣುಕುಮಾರ್ (ಹೊಳೇನರಸೀಪುರ) ಅವರಿಗೆ ದಿನಾಂಕ: 05.07.2021 ರಿಂದಲೇ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ ತಹಶೀಲ್ದಾರ್ ಗ್ರೇಡ್-1 ವೃಂದದ ವೇತನ ಶ್ರೇಣಿ ರೂ. 52,650 – 97,100 ರಲ್ಲಿ ಮುಂಬಡ್ತಿ ನೀಡಲಾಗಿದೆ.
-
ಜೇಷ್ಠತೆ ಆಧಾರಿತ ಪೂರ್ವಾನ್ವಯ ಮುಂಬಡ್ತಿ: ಸರ್ಕಾರದ ಅಂತಿಮ ಜೇಷ್ಠತಾ ಪಟ್ಟಿಯನ್ನಾಧರಿಸಿ, ತಮ್ಮ ಕಿರಿಯ ಅಧಿಕಾರಿಗಳಿಗೆ ಮುಂಬಡ್ತಿ ಸಿಕ್ಕಿದ್ದ ಕಾರಣಕ್ಕೆ ಹಿನ್ನಡೆ ಅನುಭವಿಸಿದ್ದ ಆರ್. ಶೂಲದಯ್ಯ, ಎಲ್. ಜಯಣ್ಣ, ಚಿದಂಬರ ಶೇಷಗಿರಿ ರಾವ್ ಕುಲಕರ್ಣಿ, ಶಶಿಧರ ಜಿ. ಮಾಡ್ಯಾಳ, ರಾಜೇಂದ್ರ ಗೋಪಾಳ ಹೊಸೂರ, ಪರಿಮಳ ಕೆ.ದೇಶಪಾಂಡೆ ಸೇರಿದಂತೆ 10 ಅಧಿಕಾರಿಗಳಿಗೆ ದಿನಾಂಕ: 05.07.2021 ರಿಂದ ಅನ್ವಯವಾಗುವಂತೆ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಪ್ರಮೋಷನ್ ನೀಡಲಾಗಿದೆ.
-
ತಕ್ಷಣದಿಂದ ಜಾರಿಗೆ ಬರುವಂತೆ ಭಾರಿ ಮುಂಬಡ್ತಿ: ಇದೇ ವೇಳೆ ಜೂನ್ 02, 2026 ರಂದು ಪ್ರಕಟಿಸಲಾದ ಅಂತಿಮ ಜೇಷ್ಠತಾ ಪಟ್ಟಿಯ ಅನ್ವಯ, ಬರೋಬ್ಬರಿ 221 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ಗ್ರೇಡ್-1 ವೃಂದದ ನೂತನ ವೇತನ ಶ್ರೇಣಿ ರೂ. 83,700 – 1,55,200 ರಲ್ಲಿ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಲಾಗಿದೆ. ಈ ಪಟ್ಟಿಯಲ್ಲಿ ಟಿ.ಬಿ.ಹೊಸೂರ, ಎಲ್ ಎಸ್ ರಮೇಶ, ಅಶೋಕ ಎಸ್.ಯು., ಮಂಜುಳ ಕೆ. ನಾಯಕ್, ಮೇಘ @ ಶರ್ಮಿಳಾ ಸೇರಿದಂತೆ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಒಟ್ಟು 221 ಅಧಿಕಾರಿಗಳ ಹೆಸರು ಒಳಗೊಂಡಿದೆ.
ಪ್ರಮುಖ ಷರತ್ತುಗಳು: ಮುಂಬಡ್ತಿ ಪಡೆದ ಬಹುತೇಕ ಅಧಿಕಾರಿಗಳನ್ನು ಸದ್ಯಕ್ಕೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ/ಸ್ಥಳದಲ್ಲಿಯೇ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮುಂದುವರೆಸಲಾಗಿದೆ. ಆದರೆ, ಗ್ರೇಡ್-2 ಹುದ್ದೆಗಳಲ್ಲಿ ಮುಂದುವರೆಯುವ ಅಧಿಕಾರಿಗಳು ಸರ್ಕಾರದ ಮುಂದಿನ ಆದೇಶ ಬರುವವರೆಗೂ ತಹಶೀಲ್ದಾರ್ ಗ್ರೇಡ್-2 ವೃಂದಕ್ಕೆ ನಿಗದಿಪಡಿಸಿರುವ ಕರ್ತವ್ಯಗಳನ್ನೇ ನಿರ್ವಹಿಸತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಮುಂಬಡ್ತಿ ಪಡೆದ ಅಧಿಕಾರಿಗಳು ತಮ್ಮ ಸ್ಥಳನಿಯುಕ್ತಿ ಹುದ್ದೆಗೆ ವರದಿ ಮಾಡಿಕೊಂಡು ಸಿಟಿಸಿ ಪ್ರತಿಯನ್ನು ಇ-ಮೇಲ್ ಮೂಲಕ ಸರ್ಕಾರಕ್ಕೆ ಕಳುಹಿಸಲು ಸೂಚಿಸಲಾಗಿದೆ


Leave a Reply