ಬೆಂಗಳೂರು: ರಾಜ್ಯದ ಹಳೆಯ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮತ್ತೊಮ್ಮೆ ದೊಡ್ಡ ಶಾಕ್ ನೀಡಲು ಸಜ್ಜಾಗಿದೆ. ಇಷ್ಟು ದಿನಗಳ ಕಾಲ ವಿನಾಯಿತಿ ನೀಡಲಾಗಿದ್ದ ಅತ್ಯಂತ ಸುರಕ್ಷಿತ ನೋಂದಣಿ ಫಲಕ (HSRP – High Security Registration Plate) ಅಳವಡಿಕೆಯನ್ನು ಸಾರಿಗೆ ಇಲಾಖೆಯು ಈಗ ಮತ್ತೆ ಕಡ್ಡಾಯಗೊಳಿಸುತ್ತಿದ್ದು, ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ದಂಡ ವಿಧಿಸಲು ನಿರ್ಧರಿಸಿದೆ.
ದಂಡಾಸ್ತ್ರ ಪ್ರಯೋಗಕ್ಕೆ ಕಾರಣವೇನು? ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಈ ಮಹತ್ವದ ಜಪ ಮಾಡಲು ಮುಂದಾಗಿದೆ. 2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇಲಾಖೆಯು ಈ ಹಿಂದೆ ಎಷ್ಟೇ ಬಾರಿ ಗಡುವು ವಿಸ್ತರಿಸಿ, ಮನವಿ ಮಾಡಿಕೊಂಡಿದ್ದರೂ ರಾಜ್ಯದ ವಾಹನ ಸವಾರರು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಇನ್ನೂ ಬರೋಬ್ಬರಿ ಒಂದೂವರೆ ಕೋಟಿ (1.5 ಕೋಟಿ) ವಾಹನಗಳು HSRP ಅಳವಡಿಸಿಕೊಳ್ಳದೆ ರಸ್ತೆಗಿಳಿಯುತ್ತಿವೆ. ಹೀಗಾಗಿ ಬೇಜವಾಬ್ದಾರಿ ಸವಾರರಿಗೆ ಬಿಸಿ ಮುಟ್ಟಿಸಲು ಇಲಾಖೆ ಈಗ ದಂಡಾಸ್ತ್ರ ಹಿಡಿಯಲು ಮುಂದಾಗಿದೆ.

ಸಚಿವ ಬೈರತಿ ಸುರೇಶ್ ಕಡಕ್ ಆ್ಯಕ್ಷನ್: ಬೈರತಿ ಸುರೇಶ್ ಅವರು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯಲ್ಲಿ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೇ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಪ್ಲೇಟ್ ಇಲ್ಲದಿದ್ದರೆ ದಂಡ ಫಿಕ್ಸ್ ಮಾಡಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇನ್ಮೇಲೆ ರಸ್ತೆಯಲ್ಲಿ ಹೆಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳು ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ ಆಗಲಿದ್ದು, ವಾಹನ ಸವಾರರು ತಕ್ಷಣವೇ ಆನ್‌ಲೈನ್ ಮೂಲಕ ಬುಕ್ ಮಾಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಕೊನೆಯ ಬಾರಿ ಮನವಿ ಮಾಡಿದೆ.




Leave a Reply