ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಾದ ‘ಗೃಹಲಕ್ಷ್ಮಿ’ (Gruhalakshmi Scheme) ಯೋಜನೆಯಲ್ಲಿ ನಡೆದಿರುವ ಭಾರಿ ಪ್ರಮಾಣದ ತಾಂತ್ರಿಕ ಎಡವಟ್ಟು ಹಾಗೂ ದುರುಪಯೋಗದ ಆಘಾತಕಾರಿ ವಿವರಗಳು ಈಗ ಬಹಿರಂಗವಾಗಿವೆ. ಅನರ್ಹರು ಮತ್ತು ಮೃತಪಟ್ಟವರ ಖಾತೆಗಳಿಗೂ ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣ ಪೋಲಾಗುತ್ತಿರುವುದೇ ಗ್ಯಾರಂಟಿ ಯೋಜನೆಗಳ ‘ಸರ್ಜರಿ’ಗೆ (ಪರಿಷ್ಕರಣೆ) ಸರ್ಕಾರ ಮುಂದಾಗಲು ಪ್ರಮುಖ ಕಾರಣವಾಗಿದೆ.
ರಾಜ್ಯದಲ್ಲಿ ಪ್ರಸ್ತುತ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇವರಲ್ಲಿ ಬರೋಬ್ಬರಿ 68,776 ಮೃತ ಮಹಿಳೆಯರ ಸಕ್ರಿಯವಲ್ಲದ ಅಕೌಂಟ್‌ಗಳಿಗೂ ಸತತವಾಗಿ ಮಾಸಿಕ 2,000 ರೂ. ಜಮೆಯಾಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಒಂದಲ್ಲ ಎರಡಲ್ಲ, ಬರೋಬ್ಬರಿ 79,75,66,000 ರೂಪಾಯಿ (ಸುಮಾರು 79 ಕೋಟಿ ರೂ.) ಸರ್ಕಾರದ ಹಣ ಪೋಲಾಗಿದೆ! ಒಟ್ಟು 92 ಬ್ಯಾಂಕ್‌ಗಳಲ್ಲಿ ಮಹಿಳೆಯರು ಮರಣ ಹೊಂದಿದ ನಂತರವೂ ಈ ಹಣ ಪಾವತಿಯಾಗಿದೆ. ಇದಲ್ಲದೆ ಹೆಸರೇ ಇಲ್ಲದ ‘NULL’ ಬ್ಯಾಂಕ್ ಹಾಗೂ ಕರ್ನಾಟಕದಲ್ಲೇ ಅಸ್ತಿತ್ವದಲ್ಲಿಲ್ಲದ ಹೊರರಾಜ್ಯಗಳ ಬ್ಯಾಂಕ್ ಖಾತೆಗಳಿಗೂ ಹಣ ಸಂದಾಯವಾಗಿರುವುದು ಇಡೀ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದೆ.

ಸರ್ಕಾರದ ಮುಂದಿನ ಕಠಿಣ ಕ್ರಮಗಳು: ಈ ಮಹಾ ಎಡವಟ್ಟು ತಡೆಯಲು ಎಚ್ಚೆತ್ತಿರುವ ಸರ್ಕಾರ ಈಗ ಜರಡಿ ಹಿಡಿಯಲು ಮುಂದಾಗಿದ್ದು, ಕಠಿಣ ಕ್ರಮಗಳನ್ನು ಕೈಗೊಂಡಿದೆ:
-
ಡಿಬಿಟಿ ತಡೆ (DBT Stopped): ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮೃತ ಮಹಿಳೆಯರ ಖಾತೆಗಳಿಗೆ ಹೋಗುತ್ತಿದ್ದ ನೇರ ನಗದು ವರ್ಗಾವಣೆ (DBT) ಹಣವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.
-
ಹಣ ವಾಪಸ್ ಪಡೆಯುವಿಕೆ: ಖಾತೆಗಳಲ್ಲಿ ಇನ್ನು ಹಾಗೇ ಉಳಿದಿರುವ (ಡ್ರಾ ಮಾಡದ) ಹಣವನ್ನು ಇಲಾಖೆಯು ಬ್ಯಾಂಕ್‌ಗಳ ಮೂಲಕ ನೇರವಾಗಿ ಸರ್ಕಾರದ ಖಾತೆಗೆ ಮರುಪಡೆದುಕೊಳ್ಳುತ್ತಿದೆ.
-
ಉನ್ನತಾಧಿಕಾರಿಗಳ ಸಭೆ: ಸರ್ಕಾರದ ಮುಖ್ಯ ಕಾರ್ಯದರ್ಶಿ (CS), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇ-ಗವರ್ನೆನ್ಸ್ ಅಧಿಕಾರಿಗಳು ಜಂಟಿಯಾಗಿ ಬ್ಯಾಂಕ್ ಆಡಳಿತ ಮಂಡಳಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಹಣ ವಾಪಸ್ ಪಡೆಯುವ ಪ್ರಕ್ರಿಯೆಯನ್ನು ವೇಗಗೊಳಿಸಿದ್ದಾರೆ.
ಆದರೆ, ಕೆಲವು ಖಾತೆಗಳಿಂದ ಈಗಾಗಲೇ ಎಟಿಎಂ (ATM) ಮೂಲಕ ಹಣ ಡ್ರಾ ಆಗಿರುವುದು ಮತ್ತು ಹೊರರಾಜ್ಯದ ಬ್ಯಾಂಕ್‌ಗಳಿಂದ ಸರಿಯಾದ ಮಾಹಿತಿ ಸಿಗದಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಸತ್ತವರ ಹೆಸರಿನಲ್ಲಿ ಈ ಹಣವನ್ನು ಅಕ್ರಮವಾಗಿ ಡ್ರಾ ಮಾಡುತ್ತಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಸರ್ಕಾರ ಜಾಲ ಬೀಸಿದ್ದು, ಮೃತ ಫಲಾನುಭವಿಗಳ ಸಂಪೂರ್ಣ ಪತ್ತೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.


Leave a Reply