Shocking News | ಊಟ ಮಾಡಿ ಮಾವಿನಹಣ್ಣು ಸೇವಿಸಿದ್ದ ಸಹೋದರಿಯರ ಕೊನೆಯುಸಿರು!

ಹಂಚಿಕೊಳ್ಳಿ

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಮೂಲದ ಕುಟುಂಬವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಾವಿನಹಣ್ಣು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ಭವಾನಿ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ದಾರುಣವಾಗಿ ಸಾವನ್ನಪ್ಪಿದ ದುರ್ದೈವಿಗಳು.

ಇದೇ ವೇಳೆ ಮತ್ತೊಬ್ಬ ಸಹೋದರಿ ವಿಜಯಶ್ರೀ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮೂಲತಃ ಬೀದರ್ ಮೂಲದ ಈ ಕುಟುಂಬವು ಜೀವನೋಪಾಯಕ್ಕಾಗಿ ಪ್ರಸ್ತುತ ಹೈದರಾಬಾದ್ ಬಳಿಯ ನಾರಾಯಣಗುಡದಲ್ಲಿ ವಾಸವಾಗಿದ್ದರು.

​ಕಳೆದ ಜೂನ್ 9 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿದ ಬಳಿಕ ತಾಯಿ ಹಾಗೂ ಐವರು ಹೆಣ್ಣುಮಕ್ಕಳು ಒಟ್ಟಾಗಿ ಮಾವಿನಹಣ್ಣು ಸೇವಿಸಿದ್ದರು. ಹಣ್ಣು ತಿಂದ ಸ್ವಲ್ಪ ಸಮಯದಲ್ಲೇ ತಾಯಿ ಸೇರಿದಂತೆ ಐವರು ಮಕ್ಕಳು ವಾಂತಿ, ಭೇದಿಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ಎಲ್ಲರನ್ನೂ ಹೈದರಾಬಾದ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಮತ್ತು ಸಂಧ್ಯಾರಾಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

​ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಮತ್ತು ಇನ್ನೊಬ್ಬ ಸಹೋದರಿಯ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಮಾರುಕಟ್ಟೆಯಿಂದ ತಂದಿದ್ದ ಮಾವಿನಹಣ್ಣಿನಲ್ಲಿ ರಾಸಾಯನಿಕ ಅಥವಾ ವಿಷಕಾರಿ ಅಂಶ ಇತ್ತೇ, ಅಥವಾ ಬೇರೆ ಯಾವುದಾದರೂ ಕಾರಣದಿಂದ ಈ ದುರಂತ ಸಂಭವಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆಯ (ಪೋಸ್ಟ್ ಮಾರ್ಟಂ) ವರದಿ ಕೈಸೇರಿದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds