Dharwad | ಲವ್ ಜಿಹಾದ್‌ಗೆ ಹೆದರಿ ಅಪ್ರಾಪ್ತ ಬಾಲಕಿ ಆತ್ಮ*ಹತ್ಯೆ: ತಿಂಗಳಾದರೂ ಆರೋಪಿ ಬಂಧಿಸದ ಪೊಲೀಸರು!!

ಹಂಚಿಕೊಳ್ಳಿ

ಧಾರವಾಡ: ಸಾಂಸ್ಕೃತಿಕ ನಗರಿ ಧಾರವಾಡ ಜಿಲ್ಲೆಯ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಯುವಕನ ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್‌ಮೇಯ್ಲ್‌ಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೇ 8 ರಂದೇ ಈ ಆತ್ಮಹತ್ಯೆ ಘಟನೆ ನಡೆದಿದ್ದು, ಪೊಲೀಸರ ವಿಳಂಬ ಧೋರಣೆಯಿಂದಾಗಿ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ದೂರಿನ ಅನ್ವಯ, ಸ್ಥಳೀಯ ನಿವಾಸಿಯಾದ ನಹೀಮ್ ಬೇಗ ಎಂಬ ಯುವಕ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದ್ದ ಎನ್ನಲಾಗಿದೆ. ಬಾಲಕಿಗೆ ಮುಸ್ಲಿಂ ಧರ್ಮದ ಬುರ್ಕಾ ಧರಿಸಿ ಆಕೆಯೊಂದಿಗೆ ವಿವಿಧೆಡೆ ಸುತ್ತಾಡುತ್ತಿದ್ದ. ಈ ವೇಳೆ ಬಾಲಕಿ ಬುರ್ಕಾ ಧರಿಸಿ ಹೋಗುತ್ತಿರುವುದನ್ನು ಗಮನಿಸಿದ ಪೋಷಕರು, ಆಕೆಯನ್ನು ಖುದ್ದಾಗಿ ಹಿಡಿದು ಮನೆಗೆ ಕರೆತಂದು ತೀವ್ರವಾಗಿ ಬೈದು ಬುದ್ಧಿವಾದ ಹೇಳಿದ್ದರು. ಪೋಷಕರ ಮಾತಿಗೆ ಒಪ್ಪಿದ ಬಾಲಕಿ, ತಕ್ಷಣವೇ ನಹೀಮ್ ಬೇಗನ ಸಹವಾಸದಿಂದ ದೂರ ಸರಿದಿದ್ದಳು.

ಬಾಲಕಿ ತನ್ನಿಂದ ದೂರವಾಗಿದ್ದರೂ ಕಿಡಿಗೇಡಿ ನಹೀಮ್ ಬೇಗ ಆಕೆಯನ್ನು ಬಿಟ್ಟಿರಲಿಲ್ಲ. ಬಾಲಕಿಗೆ ರಹಸ್ಯವಾಗಿ ಮೊಬೈಲ್ ಫೋನ್ ಒಂದನ್ನು ಕೊಡಿಸಿ, ಅದರ ಮೂಲಕ ನಿರಂತರವಾಗಿ ಚಾಟಿಂಗ್ ಹಾಗೂ ವಿಡಿಯೋ ಕಾಲ್ ಮಾಡುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿ, ಈ ಹಿಂದೆ ಬಾಲಕಿ ಬುರ್ಕಾ ಧರಿಸಿದ್ದಾಗ ತೆಗೆದಿದ್ದ ಫೋಟೋಗಳನ್ನು ಆಕೆಯ ಒಪ್ಪಿಗೆಯಿಲ್ಲದೆ ಇನ್‌ಸ್ಟಾಗ್ರಾಮ್ (Instagram) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾನೆ. ಇದರಿಂದ ತೀವ್ರ ಆತಂಕ ಹಾಗೂ ಸಮಾಜದಲ್ಲಿ ಮರ್ಯಾದೆ ಹೋಗುವ ಭೀತಿ ಎದುರಿಸಿದ ಬಾಲಕಿ, ಮೇ 8 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆ ಸಂಭವಿಸಿದ ತಕ್ಷಣವೇ ಮೃತ ಬಾಲಕಿಯ ಪೋಷಕರು ಗರಗ ಪೊಲೀಸ್ ಠಾಣೆಗೆ ತೆರಳಿ ನಹೀಮ್ ಬೇಗ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ, ದುರಂತ ನಡೆದು ಇಂದಿಗೆ ಒಂದು ತಿಂಗಳು ಕಳೆದರೂ ಪೊಲೀಸರು ಆರೋಪಿ ನಹೀಮ್ ಬೇಗನನ್ನು ಬಂಧಿಸಿಲ್ಲ. ಪೊಲೀಸರೇ ಬೇಕಂತಲೇ ತಲೆಮರೆಸಿಕೊಂಡಿರುವ ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇತ್ತ ದಲಿತ ಸಂಘಟನೆಗಳು ಸಂತ್ರಸ್ತ ಕುಟುಂಬದ ಪರವಾಗಿ ನಿಂತಿದ್ದು, ಆರೋಪಿಯನ್ನು ತಕ್ಷಣವೇ ಕಠಿಣ ಶಿಕ್ಷೆಗೆ ಒಳಪಡಿಸದಿದ್ದರೆ ಜಿಲ್ಲಾದ್ಯಂತ ಭಾರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿವೆ.

Leave a Reply

Your email address will not be published. Required fields are marked *

Advertisement


This will close in 3 seconds