ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿರುವ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಜಿಲೆಟಿನ್ ಸ್ಫೋಟಕ(Gelatin sticks) ಕಡ್ಡಿಗಳು ಮತ್ತು ವೈಯರ್ಗಳು ಪತ್ತೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ನಡುಕ ಹುಟ್ಟಿಸಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಚಾರ ಮಾರ್ಗದ ಬಳಿಯೂ ಇದೇ ರೀತಿಯ ಸ್ಫೋಟಕಗಳು ಪತ್ತೆಯಾಗಿದ್ದನ್ನು ನೆನಪಿಸುವಂತಿರುವ ಈ ಘಟನೆಯು ಸದ್ಯ ತನಿಖಾ ಸಂಸ್ಥೆಗಳ ತಲೆಬಿಸಿಗೆ ಕಾರಣವಾಗಿದೆ.
ಪಕ್ಕಾ ಖಚಿತ ಮಾಹಿತಿ ಆಧರಿಸಿ ಅವಲಹಳ್ಳಿ ಪೊಲೀಸರು ಕಳೆದ ಜೂನ್ 4 ರಂದು ಬೆಂಗಳೂರು ಹೊರವಲಯದ ಕಾಡ ಅಗ್ರಹಾರ ಬಳಿ ಭರ್ಜರಿ ದಾಳಿ ನಡೆಸಿದ್ದಾರೆ. ಈ ವೇಳೆ ಯಾವುದೇ ಅಧಿಕೃತ ಪರವಾನಗಿ ಅಥವಾ ದಾಖಲೆಗಳಿಲ್ಲದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬರೋಬ್ಬರಿ 225 ಜಿಲೆಟಿನ್ ಕಡ್ಡಿಗಳು ಹಾಗೂ 50 ಡಿಟೊನೇಟರ್ಗಳನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಸ್ಫೋಟಕಗಳ ರಾಶಿ ವಿಧಾನಸೌಧ ಲೇಔಟ್ ಬಳಿಯಿರುವ ‘ವೆಂಕಟೇಶ್ವರ ಗ್ರಾನೈಟ್ಸ್ ಕ್ರಶರ್’ ಕಂಪನಿಗೆ ಸೇರಿದ್ದು ಎನ್ನಲಾಗಿದೆ. ಯಾವುದೇ ಲೈಸೆನ್ಸ್ ಇಲ್ಲದೆ ಕಲ್ಲು ಕ್ವಾರಿ ಕೊರೆಸಲು ಇವುಗಳನ್ನು ಕ್ರಶರ್ ಆವರಣದಲ್ಲಿ ಬಚ್ಚಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದು, ವೆಂಕಟೇಶ್ ರೆಡ್ಡಿ (ವೆಂಕಟರಾಮ ರೆಡ್ಡಿ) – ಕ್ರಶರ್ ಕಂಪನಿ ಮಾಲೀಕ, ಲೋಕೇಶ್ ರೆಡ್ಡಿ – ಕಂಪನಿ ಉಸ್ತುವಾರಿ (ಮ್ಯಾನೇಜರ್) ಹಾಗೂ ಬ್ಲಾಸ್ಟಿಂಗ್ ಕಾರ್ಮಿಕರಾದ ವಿಕಾಸ್, ತೋಹಿದ್ ಮತ್ತು ಸಂದೀಪ್ ಎಂಬ ಐವರನ್ನು ಕಸ್ಟಡಿಗೆ ಪಡೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಾಜ್ಯ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Squad) ಇಡೀ ಪ್ರದೇಶವನ್ನು ಪರಿಶೀಲನೆಗೆ ಒಳಪಡಿಸಿದೆ. ವಿಚಾರಣೆಯ ವೇಳೆ ಆರೋಪಿಗಳು, “ನಾವು ಕಲ್ಲು ಕ್ವಾರಿ ಪ್ರದೇಶದಲ್ಲಿ ಬಂಡೆಗಳನ್ನು ಹೊಡೆಯಲು ಮಾತ್ರ ಇದನ್ನು ತರಿಸಿದ್ದೆವು” ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ಪೊಲೀಸರು ಮಾತ್ರ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುತ್ತಿಲ್ಲ. ಕೇವಲ ಕ್ವಾರಿ ಉದ್ದೇಶವೋ ಅಥವಾ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಹಾಗೂ ಬಾಂಬ್ ದಾಳಿ ನಡೆಸಲು ಹೂಡಲಾದ ಸಿನೆಮಾ ಮಾದರಿಯ ದೊಡ್ಡ ಸಂಚಿನ ಭಾಗವೇ ಇದು ಎನ್ನುವ ಆಯಾಮದಲ್ಲೂ ಆಳವಾದ ತನಿಖೆ ಮುಂದುವರಿದಿದೆ.

Leave a Reply