ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ಬೆನ್ನಲ್ಲೇ ಭಿನ್ನಮತದ ಹೊಗೆಯಾಡುತ್ತಲೇ ಇದೆ. ಇದೀಗ ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಮಗೆ ಹಂಚಿಕೆಯಾಗಿರುವ ಖಾತೆಯ ಸ್ವರೂಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಗಳು ಮೂಲಗಳಿಂದ ಹೊರಬಿದ್ದಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ದಂತಹ ಪ್ರಮುಖ ಸಂಸ್ಥೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಬಳಿಯೇ ಉಳಿಸಿಕೊಂಡಿರುವುದು ಕೃಷ್ಣ ಬೈರೇಗೌಡರ ಬೇಸರಕ್ಕೆ ಪ್ರಮುಖ ಕಾರಣವಾಗಿದೆ.
ಈ ಮಹತ್ವದ ಸಂಸ್ಥೆಗಳನ್ನು ಕೈಬಿಟ್ಟು ನೀಡಲಾದ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾವುದೇ ವಿಶೇಷ ತೂಕವಿಲ್ಲ ಎಂಬುದನ್ನು ಕೃಷ್ಣ ಬೈರೇಗೌಡ ಅವರು ನೇರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ. ದೂರವಾಣಿ ಮೂಲಕ ರಾಹುಲ್ ಗಾಂಧಿಯವರನ್ನು ಸಂಪರ್ಕಿಸಿರುವ ಅವರು, ಪ್ರಸ್ತುತ ತಮ್ಮ ಖಾತೆಯ ವ್ಯಾಪ್ತಿಯಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಎಂಬ ಕೇವಲ ಐದು ನಗರ ಪಾಲಿಕೆಗಳ ನಿರ್ವಹಣೆ ಮಾತ್ರವಿದ್ದು, ಜನರಿಗೆ ಗೋಚರಿಸುವಂತಹ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದು ಅಡ್ಡಿಯಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೂ, ಬೆಂಗಳೂರು ಜಲಮಂಡಳಿ (BWSSB) ಮತ್ತು ಮೆಟ್ರೋ ರೈಲು ನಿಗಮ (BMRCL) ಅವರ ವ್ಯಾಪ್ತಿಯಲ್ಲೇ ಉಳಿದಿವೆ. ಈ ಅಸಮಾಧಾನದ ಹಿನ್ನೆಲೆಯಲ್ಲಿಯೇ ಅವರು ಇನ್ನೂ ಅಧಿಕೃತವಾಗಿ ತಮ್ಮ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್‌ನಿಂದ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆಯಲ್ಲಿರುವ ಅವರು, ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳನ್ನು ತಮ್ಮ ಖಾತೆಗೆ ಸೇರ್ಪಡೆ ಮಾಡುವಂತೆ ಪಟ್ಟು ಹಿಡಿದಿದ್ದು, ಅದು ಸಾಧ್ಯವಾಗದಿದ್ದಲ್ಲಿ ಖಾತೆ ಬದಲಾವಣೆಗೆ ಬೇಡಿಕೆ ಇಡುವ ಸಾಧ್ಯತೆ ದಟ್ಟವಾಗಿದೆ. ಈ ಸಂಪೂರ್ಣ ಬೆಳವಣಿಗೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೂ ಮುಟ್ಟಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಖಾತೆಯ ಹಂಚಿಕೆ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ಮೊದಲಿನಿಂದಲೂ ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ. ಈ ಹಿಂದೆ ಇದೇ ಖಾತೆಯ ಭರವಸೆ ನೀಡಿ ಕೈಕೊಡಲಾಗಿತ್ತು ಎಂದು ಆರೋಪಿಸಿ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಅಂತಿಮವಾಗಿ ಹೈಕಮಾಂಡ್ ಮಧ್ಯಪ್ರವೇಶಿಸಿ, ಮುಂದಿನ ಸಂಪುಟ ವಿಸ್ತರಣೆ ವೇಳೆ ಹೆಚ್ಚುವರಿ ಖಾತೆಯ ಭರವಸೆ ನೀಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.
ಮತ್ತೊಂದೆಡೆ, ಸಚಿವ ಭೈರತಿ ಸುರೇಶ್ ಅವರ ಹೆಸರು ಮೊದಲ ಸಂಪುಟ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದರ ಹಿಂದೆಯೂ ಹಲವು ರಾಜಕೀಯ ಲೆಕ್ಕಾಚಾರಗಳಿದ್ದವು ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಭೈರತಿ ಸುರೇಶ್ ಅವರು ಬೆಂಗಳೂರು ಸುತ್ತಮುತ್ತಲಿನ ನೂರಾರು ಕೋಟಿ ಮೌಲ್ಯದ ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದ್ದರು. ಅಲ್ಲದೆ, ಅಧಿಕಾರಿಗಳ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ತರುವ ಮೂಲಕ ರಾಜಕೀಯ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಿದ್ದರು. ಈ ಕಠಿಣ ಕ್ರಮಗಳು ಪಕ್ಷದೊಳಗಿನ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಇತ್ತೀಚೆಗಷ್ಟೇ ವಿಧಾನಸೌಧದಲ್ಲಿ ಭೈರತಿ ಸುರೇಶ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ಸಭೆಯಲ್ಲೂ ಪ್ರಮುಖವಾಗಿ ಬಿಡಿಎ ಮತ್ತು ಬಿಎಂಆರ್‌ಡಿಎ ಸೇರ್ಪಡೆ ಕುರಿತಾಗಿಯೇ ಗಂಭೀರ ಸಮಾಲೋಚನೆ ನಡೆದಿದೆ ಎಂದು ಆಪ್ತ ಮೂಲಗಳು ದೃಢಪಡಿಸಿವೆ.

Leave a Reply