ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರಂಭಿಕ ಆರ್ಭಟವೇ ಭಾರಿ ಜೋರಾಗಿದ್ದು, ವರುಣನ ಅಬ್ಬರಕ್ಕೆ ರಾಜ್ಯದ ಹಲವು ಜಿಲ್ಲೆಗಳು ನಡುಗಲಾರಂಭಿಸಿವೆ. ಹವಾಮಾನ ಇಲಾಖೆಯು ಇಡೀ ಕರ್ನಾಟಕಕ್ಕೆ ಹೈ ಅಲರ್ಟ್ ಘೋಷಿಸಿದ್ದು, ಮುಂದಿನ ನಾಲ್ಕು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿಗೆ ಈಗಾಗಲೇ ಎನ್‌ಡಿಆರ್‌ಎಫ್ (NDRF) ಪಡೆಗಳು ಆಗಮಿಸಿವೆ.
ಕೊಡಗಿನಲ್ಲಿ ಜಾಗೃತಿ: 1,800ಕ್ಕೂ ಹೆಚ್ಚು ಮನೆಗಳ ಗುರುತು:
2018-19ರ ಸಾಲಿನ ಪ್ರಕೃತಿ ವಿಕೋಪದ ಕಹಿ ನೆನಪುಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಬೆಟ್ಟ-ಗುಡ್ಡಗಳು ಹೆಚ್ಚಿರುವುದರಿಂದ ಜಿಲ್ಲಾಡಳಿತ ತೀವ್ರ ಎಚ್ಚರಿಕೆ ವಹಿಸಿದೆ. ಅಪಾಯಕಾರಿ ಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ನೋಟಿಸ್ ನೀಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಅಪಾಯದ ವಲಯದಲ್ಲಿರುವ ಮನೆಗಳನ್ನು ಗುರುತಿಸುವ ಕಾರ್ಯ ನಡೆದಿದ್ದು, ಮಡಿಕೇರಿಯ ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದಲ್ಲಿ 1,300 ಮನೆಗಳು, ಮಂಗಳಾದೇವಿನಗರದಲ್ಲಿ 200 ಮನೆಗಳು ಹಾಗೂ ಆಜಾದ್‌ನಗರದಲ್ಲಿ 350 ಮನೆಗಳನ್ನು ಗುರುತಿಸಲಾಗಿದೆ. ಕುಶಾಲನಗರದ ನೆಲ್ಲಿಹುದಿಕೇರಿ ಮತ್ತು ಕರಡಿಗೋಡು ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.
ಮಲ್ಪೆ ಬೀಚ್ ಪ್ರವಾಸಿಗರಿಗೆ ನಿರ್ಬಂಧ: 10 ಅಡಿ ಎತ್ತರದ ತಡೆಬೇಲಿ!
ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ಗೆ ಬರುವ ಲಕ್ಷಾಂತರ ಪ್ರವಾಸಿಗರಿಗೆ ಸದ್ಯ ನಿರಾಸೆ ಕಾದಿದೆ. ಮಳೆಗಾಲದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿ ಸಮುದ್ರದ ಅಲೆಗಳು ರೌದ್ರನರ್ತನ ಆರಂಭಿಸಿರುವುದರಿಂದ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ಕಡ್ಡಾಯ ನಿರ್ಬಂಧಿಸಲಾಗಿದೆ. ಸೆಪ್ಟೆಂಬರ್ 15ರ ತನಕ ಈ ನಿಯಮ ಜಾರಿಯಲ್ಲಿರಲಿದ್ದು, ಮುನ್ನೆಚ್ಚರಿಕೆಯಾಗಿ ಸಮುದ್ರ ತೀರದ ಬಳಿ ಸುಮಾರು 1 ಕಿಲೋಮೀಟರ್ ಉದ್ದಕ್ಕೂ 10 ಅಡಿ ಎತ್ತರದ ಕಬ್ಬಿಣದ ತಡೆಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ನಿಯಮ ಮೀರಿ ಯಾರೂ ಕಡಲಿಗೆ ಇಳಿಯದಂತೆ ಟೂರಿಸ್ಟ್ ಪೊಲೀಸ್, ಲೈಫ್ ಗಾರ್ಡ್ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಕಟ್ಟುನಿಟ್ಟಿನ ಕಣ್ಗಾವಲು ಇಟ್ಟಿದ್ದಾರೆ.
ಕಲಬುರಗಿಯಲ್ಲಿ ಸೇತುವೆ ಕುಸಿತ; ಮನೆಗಳಿಗೆ ನುಗ್ಗಿದ ನೀರು:
ಭಾರೀ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಇದ್ದ ಕಿರಿದಾದ ಪ್ರಮುಖ ಸಂಪರ್ಕ ಸೇತುವೆಯೊಂದು ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಚಿಮ್ಮನಚೋಡ-ನರನಾಳ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತಗೊಂಡಿದ್ದು, ಚಿಂಚೋಳಿಯಿಂದ ಭಾಲ್ಕಿ ತಾಲೂಕಿಗೆ ಕನೆಕ್ಟ್ ಆಗುವ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ನಿರಂತರ ಮಳೆಗೆ ಇದೇ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನರು ದಿನಬಳಕೆ ವಸ್ತುಗಳಿಗಾಗಿ ಪರದಾಡುವಂತಾಗಿದೆ.
ಕರಾವಳಿಗೆ ಆರೆಂಜ್ ಅಲರ್ಟ್ – ಮೀನುಗಾರರಿಗೆ ವಾರ್ನಿಂಗ್:
ಹವಾಮಾನ ಇಲಾಖೆಯು ಬೆಂಗಳೂರಿಗೆ ಯೆಲ್ಲೋ ಅಲರ್ಟ್ ನೀಡಿದ್ದರೆ, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಕರಾವಳಿ ತೀರದಲ್ಲಿ ಗಂಟೆಗೆ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.










Leave a Reply