CM ಡಿ.ಕೆ.ಶಿವಕುಮಾರ್ ನಿವಾಸದ ಬಳಿ ವಾಮಾಚಾರದ ಶಂಕೆ: ರಸ್ತೆ ಮಧ್ಯೆ ಸತ್ತ ಕೋಳಿ, ನಿಂಬೆಹಣ್ಣು ಪತ್ತೆ!

ಹಂಚಿಕೊಳ್ಳಿ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರ ಸದಾಶಿವನಗರ ನಿವಾಸದ ಬಳಿ ಕಿಡಿಗೇಡಿಗಳು ವಾಮಾಚಾರ (Black magic) ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮನೆಮಾಡಿದೆ. ಸಿಎಂ ನಿವಾಸದ ಹಿಂಭಾಗದಲ್ಲಿರುವ ಜಿಬಿಎ (GBA) ಮೈದಾನದ ಮುಂಭಾಗದ ಮೂರು ಕೂಡು ರಸ್ತೆಯಲ್ಲಿ ಸತ್ತ ಕೋಳಿ ಹಾಗೂ ನಿಂಬೆಹಣ್ಣುಗಳು ಪತ್ತೆಯಾಗಿವೆ.

ಮೂರು ರಸ್ತೆಗಳು ಸೇರುವ ಜಾಗದಲ್ಲಿ ರಸ್ತೆಯ ಮಧ್ಯೆ ಬಿಳಿ ಬಣ್ಣದಲ್ಲಿ ವೃತ್ತಾಕಾರವನ್ನು ಎಳೆಯಲಾಗಿದೆ. ಆ ವೃತ್ತದೊಳಗೆ ಸತ್ತುಬಿದ್ದಿರುವ ಒಂದು ಕೋಳಿ ಹಾಗೂ ಮೂರು ನಿಂಬೆಹಣ್ಣುಗಳನ್ನು ಇಡಲಾಗಿದೆ. ನಿಂಬೆಹಣ್ಣುಗಳನ್ನು ತುಳಿದು ವಿಚಿತ್ರ ರೀತಿಯಲ್ಲಿ ಪೂಜೆ ಅಥವಾ ವಾಮಾಚಾರ ಮಾಡಿರುವ ಕುರುಹುಗಳು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿವೆ.

ಆತಂಕದಲ್ಲಿ ರಸ್ತೆ ದಾಟಲು ಹಿಂದೇಟು ಹಾಕುತ್ತಿರುವ ಜನ

ಬೆಳ್ಳಂಬೆಳಗ್ಗೆ ಈ ವಿಚಿತ್ರ ದೃಶ್ಯವನ್ನು ನೋಡಿದ ಸ್ಥಳೀಯ ನಿವಾಸಿಗಳು ಹಾಗೂ ಪಾದಚಾರಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ. ವೃತ್ತಾಕಾರ, ಸತ್ತ ಕೋಳಿ ಮತ್ತು ನಿಂಬೆಹಣ್ಣುಗಳನ್ನು ನೋಡಿ ಭಯಬೀತರಾಗಿರುವ ಜನ, ಆ ರಸ್ತೆಯನ್ನು ದಾಟಲು ಹಿಂದೇಟು ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹಾಗೂ ಕಾರು ಚಾಲಕರು ಸಹ ಆ ಜಾಗವನ್ನು ಬಿಟ್ಟು, ದೂರದಿಂದಲೇ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಇದು ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ವಾಮಾಚಾರವೋ ಅಥವಾ ಬೇರೆ ಯಾವುದಾದರೂ ದುರುದ್ದೇಶದಿಂದ ಜನರಲ್ಲಿ ಭೀತಿ ಹುಟ್ಟಿಸಲು ಮಾಡಿರುವ ಕೃತ್ಯವೋ ಎಂಬ ಬಗ್ಗೆ ಸ್ಥಳೀಯವಾಗಿ ಭಾರಿ ಚರ್ಚೆ ನಡೆಯುತ್ತಿದೆ.

ವಿಐಪಿ (VIP) ವಲಯವಾಗಿರುವ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಮನೆ ಇರುವ ಈ ಹೈ-ಸೆಕ್ಯುರಿಟಿ (High Security) ಪ್ರದೇಶದಲ್ಲಿಯೇ, ಅದೂ ನಡುರಸ್ತೆಯಲ್ಲಿ ಇಂತಹ ನಿಗೂಢ ಘಟನೆ ನಡೆದಿರುವುದು ತೀವ್ರ ಕುತೂಹಲ ಹಾಗೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

Advertisement


This will close in 3 seconds