ಕರ್ನಾಟಕದ ಪ್ರತಿಷ್ಠಿತ ಟಿ20 ಲೀಗ್ ‘ಮಹಾರಾಜ ಟ್ರೋಫಿ’ ಟೂರ್ನಿಯ 5 ನೇ ಸೀಸನ್‌ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೆ ಈ ಹರಾಜಿನಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆ.ಎಲ್. ರಾಹುಲ್ (KL Rahul) ಯಾವುದೇ ತಂಡಕ್ಕೆ ಬಿಕರಿಯಾಗದೇ ‘ಅನ್‌ಸೋಲ್ಡ್’ ಆಗಿ ಉಳಿದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇವಲ 2 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿದ್ದ ರಾಹುಲ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ.
ಕೆ.ಎಲ್. ರಾಹುಲ್ ಅವರಂತಹ ವಿಶ್ವದರ್ಜೆಯ ಆಟಗಾರ ಅನ್‌ಸೋಲ್ಡ್ ಆಗಿ ಉಳಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ಹಲವು ಅನುಮಾನಗಳು ಮೂಡಿದ್ದವು. ಆದರೆ ಅವರು ಬಿಕರಿಯಾಗದೇ ಉಳಿಯಲು ಫ್ರಾಂಚೈಸಿಗಳ ನಿರಾಸಕ್ತಿಯಲ್ಲ, ಬದಲಾಗಿ ಮುಂಬರುವ ಭಾರತ ತಂಡದ ಅಂತಾರಾಷ್ಟ್ರೀಯ ಸರಣಿ ಮತ್ತು ಅವರ ಅಲಭ್ಯತೆಯೇ ಮುಖ್ಯ ಕಾರಣವಾಗಿದೆ. ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಕೆ.ಎಲ್.ಆರ್ ಅಲಭ್ಯರಾಗುವುದು ಖಚಿತವಾಗಿದ್ದರಿಂದಲೇ ಫ್ರಾಂಚೈಸಿಗಳು ಅವರ ಮೇಲೆ ಬಿಡ್ ಮಾಡಲಿಲ್ಲ.

ಕೆ.ಎಲ್. ರಾಹುಲ್ ಅಲಭ್ಯರಾಗುತ್ತಿರುವುದು ಏಕೆ?
ಟೀಮ್ ಇಂಡಿಯಾದ ಮುಂಬರುವ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ರಾಹುಲ್ ಅವರಿಗೆ ರಾಜ್ಯದ ಲೀಗ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್ ಭಾರತ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದ ಬೆನ್ನಲ್ಲೇ ಮೂರು ಪಂದ್ಯಗಳ ರೋಚಕ ಏಕದಿನ ಸರಣಿ ಆರಂಭವಾಗಲಿದೆ. ಅಫ್ಘಾನಿಸ್ತಾನ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರಮುಖ ಸರಣಿಯು ಜುಲೈ 1 ರಿಂದ ಆರಂಭವಾಗಲಿದೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿದ್ದು, ಈ ಸಂಪೂರ್ಣ ಅವಧಿಯಲ್ಲಿ ಕೆ.ಎಲ್. ರಾಹುಲ್ ಭಾರತ ತಂಡದ ಪರ ಜೂನ್-ಜುಲೈ ತಿಂಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಟೂರ್ನಿಗೆ ಲಭ್ಯರಿರದ ಆಟಗಾರನಿಗೆ ಅನಗತ್ಯವಾಗಿ ಹಣ ವ್ಯಯಿಸಿ, ತಂಡದ ಒಂದು ಪ್ರಮುಖ ಸ್ಲಾಟ್ ಅನ್ನು ವ್ಯರ್ಥ ಮಾಡಿಕೊಳ್ಳಲು ಯಾವುದೇ ಫ್ರಾಂಚೈಸಿಗಳು ಮುಂದಾಗಲಿಲ್ಲ.
ಲಭ್ಯವಿಲ್ಲದಿದ್ದರೂ ಹರಾಜಿನಲ್ಲಿ ಹೆಸರು ಬಂದಿದ್ದು ಏಕೆ?
ರಾಷ್ಟ್ರೀಯ ತಂಡದ ಪರ ಆಡುವುದು ಖಚಿತವಾಗಿದ್ದರೂ ರಾಹುಲ್ ಹೆಸರು ಹರಾಜಿನಲ್ಲಿ ಏಕೆ ಬಂತು ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ತಾಂತ್ರಿಕ ನಿಯಮಗಳಿವೆ.
ಮಹಾರಾಜ ಟೂರ್ನಿಯ ಹರಾಜಿನ ದಿನಾಂಕ ಪ್ರಕಟವಾಗುವುದಕ್ಕಿಂತ ಮುಂಚೆಯೇ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ರಾಹುಲ್ ಅವರು ಕರ್ನಾಟಕದ ಮೂಲ ಆಟಗಾರನಾಗಿರುವುದರಿಂದ ಆರಂಭದಲ್ಲಿ ತಮ್ಮ ತವರು ರಾಜ್ಯದ ಟೂರ್ನಿಯಲ್ಲಿ ಆಡುವ ಆಸಕ್ತಿಯಿಂದ ಹೆಸರು ನೋಂದಾಯಿಸಿದ್ದರು. ಆದರೆ ಇದಾದ ಬಳಿಕವಷ್ಟೇ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ದಿನಾಂಕಗಳು ಅಧಿಕೃತವಾಗಿ ನಿಗದಿಯಾಗಿದ್ದರಿಂದ ಅವರು ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಹಾಜರಾಗುವುದು ಅನಿವಾರ್ಯವಾಯಿತು.
ಕೆಎಸ್ಸಿಎ ನಿಯಮಗಳ ಪ್ರಕಾರ, ಒಮ್ಮೆ ಆಟಗಾರ ಅಧಿಕೃತವಾಗಿ ಹರಾಜಿನ ಡ್ರಾಫ್ಟ್‌ಗೆ ಹೆಸರು ನೋಂದಾಯಿಸಿದರೆ, ಅವರ ಹೆಸರನ್ನು ಹರಾಜಿನ ಪಟ್ಟಿಯಿಂದ ದಿಢೀರ್ ಎಂದು ತೆಗೆದುಹಾಕಲು ಬರುವುದಿಲ್ಲ. ಆ ಹೆಸರನ್ನು ಹರಾಜುದಾರರು ಪ್ರಕ್ರಿಯೆಯ ಪ್ರಕಾರ ಕರೆಯಲೇಬೇಕಾಗುತ್ತದೆ. ಹೀಗಾಗಿಯೇ ಕೆ.ಎಲ್. ರಾಹುಲ್ ಹೆಸರು ಹರಾಜಿನಲ್ಲಿ ಕೇಳಿಬಂದಿತ್ತು. ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹರಾಜುದಾರರು ಎಲ್ಲಾ ಫ್ರಾಂಚೈಸಿಗಳಿಗೆ “ರಾಹುಲ್ ಅವರು ಅಂತಾರಾಷ್ಟ್ರೀಯ ಸರಣಿ ನಿಮಿತ್ತ ಟೂರ್ನಿಗೆ ಅಲಭ್ಯರಾಗಲಿದ್ದಾರೆ” ಎಂಬ ಅಧಿಕೃತ ಮಾಹಿತಿಯನ್ನು ನೀಡಿದ್ದರು. ಈ ಕಾರಣದಿಂದಲೇ ಫ್ರಾಂಚೈಸಿಗಳು ಬಿಡ್ ಮಾಡದೆ ಸುಮ್ಮನಾಗಿದ್ದವು.


Leave a Reply