ಭಾರತೀಯ ಜನತಾ ಪಾರ್ಟಿ (BJP) ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರ ನಿರ್ಗಮನದಿಂದ ಪಕ್ಷದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ರಾಜ್ಯ ಬಿಜೆಪಿ ಘಟಕ ಸ್ಪಷ್ಟಪಡಿಸಿದೆ. ಅಣ್ಣಾಮಲೈ ಅವರ ರಾಜೀನಾಮೆ ಕುರಿತು ಮೊದಲ ಬಾರಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, ಈ ಬೆಳವಣಿಗೆಯಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಅಣ್ಣಾಮಲೈ ರಾಜೀನಾಮೆ ಕುರಿತು ನಾನು ವಿಶೇಷವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಆದರೆ ಬಿಜೆಪಿ ಇತ್ತೀಚೆಗೆ ಹುಟ್ಟಿಕೊಂಡ ಪಕ್ಷವಲ್ಲ, ಇದೊಂದು ಸಿದ್ಧಾಂತ ಆಧಾರಿತ ಪಕ್ಷವಾಗಿದ್ದು, ಈ ಬೆಳವಣಿಗೆಯಿಂದ ಖಂಡಿತವಾಗಿಯೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನೈನಾರ್ ನಾಗೇಂದ್ರನ್ ಸುದ್ದಿ ಸಂಸ್ಥೆ ಎಎನ್‌ಐ (ANI) ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಹೊಸ ರಾಜಕೀಯ ಪಕ್ಷವನ್ನು ಕಟ್ಟಬಹುದು, ಆ ಹಕ್ಕು ಎಲ್ಲರಿಗೂ ಇದೆ. ಹೀಗಾಗಿ ಅಣ್ಣಾಮಲೈ ಅವರ ರಾಜೀನಾಮೆಯು ಪಕ್ಷದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಪಕ್ಷದಲ್ಲಿ ರಾಜ್ಯ ಮಟ್ಟದ ನಾಯಕರಿಗೆ ಮತ್ತು ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ ಎಂಬ ಆರೋಪಗಳು ಸಂಪೂರ್ಣವಾಗಿ ತಪ್ಪು ಎಂದು ಅವರು ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ದೇಶಕ್ಕೆ ಭೇಟಿ ನೀಡಿದರೂ ತಮಿಳು ಮಣ್ಣು, ಅದರ ಪರಂಪರೆ ಮತ್ತು ಶ್ರೇಷ್ಠತೆಯ ಬಗ್ಗೆ ಸದಾ ಮಾತನಾಡುತ್ತಾರೆ. ನಮ್ಮ ಪ್ರಾಚೀನ ಶಾಸನಗಳನ್ನು ಮರಳಿ ಪಡೆಯಲು ಸಹ ಅವರು ಸಹಾಯ ಮಾಡಿದ್ದಾರೆ. ಬಿಜೆಪಿ ಪಕ್ಷವು ತಮಿಳು ಭಾಷೆಯ ಬಗ್ಗೆ ನಿಜವಾದ ಕಾಳಜಿಯೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ನಾಗೇಂದ್ರನ್ ಇದೇ ವೇಳೆ ಸಮರ್ಥಿಸಿಕೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ (Nitin Nabin) ಅವರು ಈ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಣ್ಣಾಮಲೈ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರು ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುಮಾರು 6 ವರ್ಷಗಳ ಕಾಲ ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅಣ್ಣಾಮಲೈ, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಾನು ಅತ್ಯಂತ ಘನತೆಯಿಂದಲೇ ಬಿಜೆಪಿಯಿಂದ ಹೊರಬಂದಿದ್ದು, ಹೊಸ ರೀತಿಯ ರಾಜಕಾರಣವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಗುರಿಗಳು ಬಹಳ ದೊಡ್ಡದಾಗಿವೆ ಮತ್ತು ಎಲ್ಲರನ್ನು ಒಳಗೊಳ್ಳುವ ಕಾರ್ಯಸೂಚಿಯೊಂದಿಗೆ ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿ, ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ.


Leave a Reply