ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕ ಅಭಿಜಿತ್ ದಿಪ್ಕೆ ಅವರು ಶುಕ್ರವಾರ ಅಮೆರಿಕದಿಂದ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ತಮ್ಮ ಭವಿಷ್ಯವನ್ನು ಸಂವಿಧಾನದ ಕೈಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯ ದಿನದಂದು ಅಮೆರಿಕದಿಂದ ಆಗಮಿಸುತ್ತಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರನ್ನು ಸ್ವಾಗತಿಸಲು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸುವಂತೆ ಈ ಹಿಂದೆ ಕರೆ ನೀಡಲಾಗಿತ್ತು. ಆದರೆ, ಅನಿರೀಕ್ಷಿತ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸೇರದಂತೆ ಸಿಜೆಪಿ ಗುರುವಾರ ತನ್ನ ಬೆಂಬಲಿಗರಿಗೆ ಮನವಿ ಮಾಡಿದೆ.

ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ನೀಡಿದ್ದ ಕರೆಗೆ ನಮ್ಮ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಬಯಸುವವರಿಂದ ನಮಗೆ ಸಿಗುತ್ತಿರುವ ಪ್ರತಿಕ್ರಿಯೆ ಊಹೆಗೂ ನಿಲುಕದಾಗಿದೆ ಎಂದು ಸಿಜೆಪಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸುವಂತೆ ಪಕ್ಷವು ತನ್ನ ಬೆಂಬಲಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಶಾಂತಿಯುತ ಪ್ರತಿಭಟನೆಗೆ ಒತ್ತು ನೀಡಿರುವ ಅಭಿಜಿತ್ ದಿಪ್ಕೆ, ಅಭಿಯಾನವು ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆಯಬೇಕು ಎಂದು ಬೆಂಬಲಿಗರಲ್ಲಿ ವಿನಂತಿಸಿದ್ದಾರೆ. ನಾವೆಲ್ಲರೂ ಕಾನೂನು ಗೌರವಿಸುವ ನಾಗರಿಕರು. ನಮ್ಮ ವಿರೋಧಿಗಳು ಈ ಚಳವಳಿಯನ್ನು ಹತ್ತಿಕ್ಕಲು ಅಥವಾ ಕೆಟ್ಟದಾಗಿ ಬಿಂಬಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಅವರಿಗೆ ಅಂತಹ ಯಾವುದೇ ಅವಕಾಶವನ್ನು ನಾವು ನೀಡಬಾರದು ಎಂದು ಅವರು ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಜೂನ್ 6 ರಂದು ನಡೆಯಲಿರುವ ಪ್ರತಿಭಟನೆಗೆ ಪೊಲೀಸ್ ಅನುಮತಿ ಪಡೆಯುವ ಕುರಿತು ಎದ್ದಿರುವ ಪ್ರಶ್ನೆಗಳ ನಡುವೆಯೇ ಸಿಜೆಪಿಯ ನೂತನ ವಕ್ತಾರ ವಿಜೇತ ದಹಿಯಾ ಪ್ರತಿಕ್ರಿಯಿಸಿದ್ದಾರೆ. ಇದು ಸಂಘಟನೆಯ ಕಾರ್ಯತಂತ್ರದ ಒಂದು ಭಾಗವಾಗಿದೆ. ಜನರ ಭಾವನೆಗಳು ಈ ಪ್ರತಿಭಟನೆಯನ್ನು ಮುನ್ನಡೆಸುತ್ತಿವೆ. ಸದ್ಯಕ್ಕೆ ಅವರು ಅಭಿಜಿತ್ ಅವರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಹೀಗಾಗಿ ಜೂನ್ 6 ರಂದು ಖುದ್ದಾಗಿ ಅಭಿಜಿತ್ ಅವರೇ ಪೊಲೀಸರಿಂದ ಅನುಮತಿ ಕೋರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಲು ಅಧಿಕಾರಿಗಳು ಅಗತ್ಯ ಅನುಮತಿ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಪಕ್ಷವು ವ್ಯಕ್ತಪಡಿಸಿದೆ.


Leave a Reply