ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕಗೊಂಡ ಬೆನ್ನಲ್ಲೇ, ಇತ್ತ ಸಂಘಟನೆಯ ಗದ್ದುಗೆ ಏರಿರುವ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಪಕ್ಷದ ನಾಯಕರಿಗೆ ಅತ್ಯಂತ ಕಠಿಣ ಹಾಗೂ ನೇರವಾದ ಸಂದೇಶ ರವಾನಿಸಿದ್ದಾರೆ. ಈ ಹೇಳಿಕೆಯು ಆಡಳಿತ ಹಾಗೂ ಸಂಘಟನೆಯ ನಡುವಿನ ಶೀತಲ ಸಮರವನ್ನು ಮೊದಲ ದಿನವೇ ಬೀದಿಗೆ ತಂದಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (KPCC) ನೂತನ ಅಧ್ಯಕ್ಷರಾಗಿ ನೇಮಕವಾದ ಬಳಿಕ ಅತ್ಯಂತ ಆಕ್ರಮಣಕಾರಿಯಾಗಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, “ರಾಜ್ಯದಲ್ಲಿ ಅಧಿಕಾರ ಹಾಗೂ ಸಚಿವ ಸ್ಥಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜೊತೆ ಹೋಗಿ. ಆದರೆ, ಪಕ್ಷದ ಹೋರಾಟ ಮತ್ತು ವರಿಷ್ಠರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜೊತೆ ಬನ್ನಿ” ಎಂದು ಬಹಿರಂಗವಾಗಿಯೇ ಗುಡುಗಿದ್ದಾರೆ. ಆದರೆ, ಇದರಲ್ಲಿ ಯಾವುದೇ ಬಣ ರಾಜಕೀಯವಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕವೇ ಹೊಸ ದಾಳ ಉರುಳಿಸಿದ್ದಾರೆ.

“ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ನನ್ನ ಮೇಲಿಟ್ಟಿರುವ ನಂಬಿಕೆಯಿಂದಾಗಿ ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ವಿದ್ಯಾರ್ಥಿ ದೆಸೆಯಿಂದಲೇ ಪಕ್ಷದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ನಾನು ಎಂದೂ ವರಿಷ್ಠರ ಬಳಿ ಹೋಗಿ ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದವನಲ್ಲ. ನಾನು ಅಧಿಕಾರದ ಆಸೆಗಾಗಿ ಪಕ್ಷದಲ್ಲಿಲ್ಲ, ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಸಿಪಾಯಿ. ನಮ್ಮ ಹಿರಿಯರ ಆದರ್ಶಗಳನ್ನು ಪಾಲಿಸಿಕೊಂಡು ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಅವರ ಅಧಿಕಾರದ ಲಾಬಿಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಜಾತಿ ರಾಜಕಾರಣದ ಕುರಿತು ಮಾತನಾಡಿದ ಅವರು, “ನಾನು ಹಿಂದುಳಿದ ಅಥವಾ ಮುಂದುವರಿದ ವರ್ಗಕ್ಕೆ ಸೇರಿದವನು ಎನ್ನುವುದು ಮುಖ್ಯವಲ್ಲ. ನಾನು ಮುಂದುವರೆದವರಿಗಿಂತಲೂ ಮುಂದುವರೆದವನು. ಇನ್ನು 2028ರ ಮುಂದಿನ ಚುನಾವಣೆಗೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುತ್ತಿರುವುದು ವಾಟ್ಸಪ್ ಯುನಿವರ್ಸಿಟಿಯ (WhatsApp University) ಸೃಷ್ಟಿ ಹಾಗೂ ಅಪಪ್ರಚಾರ. ನನಗೆ ಸದ್ಯ ಪಕ್ಷ ಕಟ್ಟುವ ದೊಡ್ಡ ಜವಾಬ್ದಾರಿ ಇದೆ. ಎಸ್‌ಐಆರ್ (SIR) ಮತ್ತು ಸಿಎಎ (CAA) ವಿರುದ್ಧ ಬೀದಿಗಿಳಿದು ಹೋರಾಡುವ ಬದ್ಧತೆ ಇದೆ. ನನಗೆ ಅಧಿಕಾರ ಮುಖ್ಯವಲ್ಲ, ಹೋರಾಟವೇ ಮುಖ್ಯ” ಎಂದಿದ್ದಾರೆ.
ದೇಶದಲ್ಲಿ ಸದ್ದು ಮಾಡುತ್ತಿರುವ ಆಡಳಿತ ಶೈಲಿಯ ಕುರಿತು ಮಾತನಾಡಿದ ಹರಿಪ್ರಸಾದ್, “ನಮಗೆ ಬೇರೆ ರಾಜ್ಯದ ಅಂದರೆ ಗುಜರಾತ್ ಮಾಡೆಲ್ ನಮಗೆ ಬೇಕಾಗಿಲ್ಲ. ಬದಲಾಗಿ ನಮ್ಮದೇ ರಾಜ್ಯದ ‘ಕರ್ನಾಟಕ ಮಾಡೆಲ್’ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಸಂಪೂರ್ಣ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ” ಎಂದು ಹೇಳುವ ಮೂಲಕ ಒಗ್ಗಟ್ಟಿನ ಮಂತ್ರದೊಂದಿಗೆ ಮಾತು ಮುಗಿಸಿದ್ದಾರೆ. ಆದಾಗ್ಯೂ, ಮೊದಲ ದಿನವೇ ಸಿಎಂ ವಿರುದ್ಧ ಹರಿಪ್ರಸಾದ್ ಉಲ್ಕಾಪಾತ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


Leave a Reply