ನಾಳೆ ನೂತನ CM ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ: ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಪದಗ್ರಹಣ! ಯಾರಿಗೆಲ್ಲಾ ಇದೆ ಆಹ್ವಾನ?

ಹಂಚಿಕೊಳ್ಳಿ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಧುರೀಣ ಡಿ.ಕೆ. ಶಿವಕುಮಾರ್ ಅವರು ಜೂನ್ 3 ರ ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜಧಾನಿಯ ಲೋಕ ಭವನದಲ್ಲಿ ಇದಕ್ಕಾಗಿ ಭವ್ಯ ಹಾಗೂ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿಧಾನಸೌಧ ಮತ್ತು ಲೋಕಭವನ ಪರಿಸರದ ಸುತ್ತಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಕಟೌಟ್‌ಗಳು, ಬೃಹತ್ ಬ್ಯಾನರ್‌ಗಳು ಹಾಗೂ ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿವೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಬುಧವಾರ ಸಂಜೆ 4.05 ಗಂಟೆಗೆ ಲೋಕ ಭವನದ ಗ್ಲಾಸ್ ಹೌಸ್‌ನಲ್ಲಿ ಸಚಿವ ಸಂಪುಟದ ಆಯ್ದ ಸದಸ್ಯರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭವು ರಾಜ್ಯ ರಾಜಕೀಯದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಲಿದೆ.

ಇತಿಹಾಸದಲ್ಲೇ ಪ್ರಥಮ: ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಪ್ರಮಾಣವಚನ

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದುವರೆಗೆ ಯಾವುದೇ ನಾಯಕ ಸರ್ವಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಉದಾಹರಣೆಗಳಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಹಿಂದೂ ಸ್ವಾಮೀಜಿಗಳು, ಕ್ರಿಶ್ಚಿಯನ್ ಫಾದರ್‌ಗಳು ಹಾಗೂ ಮುಸ್ಲಿಂ ಮೌಲ್ವಿಗಳು ಸೇರಿದಂತೆ ಎಲ್ಲಾ ಧರ್ಮ ಮತ್ತು ಜಾತಿಗಳ ಸುಮಾರು 55 ಕ್ಕೂ ಹೆಚ್ಚು ಧರ್ಮಗುರುಗಳ ದಿವ್ಯ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಸರ್ವ ಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ ಹಾಗೂ ಶಾಂತಿ-ಸೌಹಾರ್ದತೆಯ ಪರಮೋಚ್ಚ ಸಂದೇಶವನ್ನು ಸಾರಲು ಡಿಕ್ಷಿ ಮುಂದಾಗಿದ್ದಾರೆ.

ಗಣ್ಯರು ಹಾಗೂ ಜನಸಾಮಾನ್ಯರನ್ನೊಳಗೊಂಡ ಆಹ್ವಾನಿತರ ಪಟ್ಟಿ

ಈ ಐತಿಹಾಸಿಕ ಸಮಾರಂಭಕ್ಕೆ ಸಮಾಜದ ವಿವಿಧ ಸ್ತರದ ಗಣ್ಯರನ್ನು ಹಾಗೂ ತಳಮಟ್ಟದ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ:

  • ರಾಜಕೀಯ ನಾಯಕರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಸಂಸದರು.
  • ವಿಶೇಷ ಆಹ್ವಾನಿತರು: ಡಿ.ಕೆ. ಶಿವಕುಮಾರ್ ಅವರ ಸ್ವಗ್ರಾಮವಾದ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು.
  • ಶ್ರಮಿಕ ವರ್ಗ: ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು ಮತ್ತು ರೈತ ಮುಖಂಡರು.
  • ಸಾಮಾಜಿಕ ಪ್ರತಿನಿಧಿಗಳು: ದಲಿತ ಸಂಘಟನೆಗಳ ಮುಖಂಡರು, ಹಿಂದುಳಿದ ವರ್ಗಗಳ ನಾಯಕರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಪ್ರತಿನಿಧಿಗಳು.
  • ವಿವಿಧ ಕ್ಷೇತ್ರಗಳು: ಸಾಹಿತಿಗಳು, ರಂಗಭೂಮಿ ಕಲಾವಿದರು, ಮಾದ್ಯಮ ಕ್ಷೇತ್ರ, ಸಿನಿಮಾ ರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಮತ್ತು ಹೋಟೆಲ್ ಉದ್ಯಮಿಗಳು.

ಬಿಗಿ ಪೊಲೀಸ್ ಭದ್ರತೆ ಮತ್ತು ಹಾಫ್ ಡೇ ರಜೆ ಘೋಷಣೆ

ಸಮಾರಂಭದ ಹಿನ್ನೆಲೆಯಲ್ಲಿ ಲೋಕಭವನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದು ಸೀಮಿತ ಆಸನ ಸಾಮರ್ಥ್ಯವಿರುವ ಒಳಾಂಗಣ ಕಾರ್ಯಕ್ರಮವಾಗಿರುವುದರಿಂದ ಅಧಿಕೃತ ಆಹ್ವಾನ ಪತ್ರಿಕೆ ಮತ್ತು ವಾಹನ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶವಿರಲಿದೆ. ಸಾರ್ವಜನಿಕರ ವೀಕ್ಷಣೆಗಾಗಿ ರಾಜಭವನದ ಹೊರಗೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಗಮನಿಸಿ: ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೂನ್ 3 ರಂದು ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಸರ್ಕಾರಿ ಕಚೇರಿಗಳ (MS Building) ನೌಕರರಿಗೆ ಅರ್ಧ ದಿನದ ರಜೆ (Half-Day Holiday) ಘೋಷಿಸಲಾಗಿದೆ. ಲೋಕಭವನದ ಸುತ್ತಮುತ್ತ ಸಾರ್ವಜನಿಕ ಸಭೆ-ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಾಹನ ಸವಾರರ ಗಮನಕ್ಕೆ: ವಿಶೇಷ ಸಂಚಾರ ಮಾರ್ಗಸೂಚಿ (Traffic Advisory)

ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ಮತ್ತು ರೇಸ್ ಕೋರ್ಸ್ ರಸ್ತೆ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇರುವುದರಿಂದ, ಜೂನ್ 3 ರ ಮಧ್ಯಾಹ್ನದಿಂದ ರಾತ್ರಿ 8.00 ಗಂಟೆಯವರೆಗೆ ಸಂಚಾರ ಪೊಲೀಸರು ವಿಶೇಷ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.

  • ಸಂಚಾರ ನಿಷೇಧಿತ ರಸ್ತೆಗಳು: ಕಬ್ಬನ್ ರಸ್ತೆ, ಕೆ.ಆರ್. ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಯಿಂದ ಲೋಕಭವನಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಅಧಿಕೃತ ಪಾಸ್ ಇಲ್ಲದ ಸಾಮಾನ್ಯ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
  • ಪರ್ಯಾಯ ಮಾರ್ಗಗಳು: ವಾಹನ ಸವಾರರು ವಿಳಂಬವನ್ನು ತಪ್ಪಿಸಲು ಕನ್ನಿಂಗ್ಹ್ಯಾಮ್ ರಸ್ತೆ, ಶಿವಾಜಿನಗರ ಹಾಗೂ ಅನಿಲ್ ಕುಂಬ್ಳೆ ಜಂಕ್ಷನ್ ಮೂಲಕ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಂಚಾರ ಪೊಲೀಸ್ ಇಲಾಖೆ ಸಲಹೆ ನೀಡಿದೆ.

Leave a Reply

Your email address will not be published. Required fields are marked *

Advertisement


This will close in 3 seconds