ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ: ಹೈಕೋರ್ಟ್‌ಗೆ ಕಲ್ಲಡ್ಕ ಪ್ರಭಾಕರ ಭಟ್ ಭರವಸೆ

ಹಂಚಿಕೊಳ್ಳಿ

ಬೆಂಗಳೂರು: ಇನ್ನು ಮುಂದೆ ಯಾವುದೇ ರೀತಿಯ ದ್ವೇಷ ಭಾಷಣ (Hate Speech) ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಕರ್ನಾಟಕ ಹೈಕೋರ್ಟ್‌ಗೆ ಭರವಸೆ (Undertaking) ನೀಡಿದ್ದಾರೆ.

ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಅವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕಲ್ಲಡ್ಕ ಪ್ರಭಾಕರ ಭಟ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ನ್ಯಾಯಾಲಯ ತಡೆಯಾಜ್ಞೆ (Stay order) ನೀಡಿತ್ತು.

ಈ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆಗೆ ಬಂದಾಗ, ದೂರುದಾರರಾದ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಎಸ್. ಬಾಲನ್ ಅವರು ತಡೆಯಾಜ್ಞೆ ತೆರವು ಮಾಡುವಂತೆ ಅರ್ಜಿ ಸಲ್ಲಿಸಿ ವಾದ ಮಂಡಿಸಿದರು. “ಕಲ್ಲಡ್ಕ ಪ್ರಭಾಕರ ಭಟ್ ಸಮುದಾಯವೊಂದರ ಮೇಲೆ ನಿರಂತರವಾಗಿ ವಿಷ ಕಾರುತ್ತಲೇ ಇರುತ್ತಾರೆ. ನ್ಯಾಯಾಲಯ ನೀಡುವ ಜಾಮೀನು ಮತ್ತು ತಡೆಯಾಜ್ಞೆಗಳನ್ನು ಬಳಸಿಕೊಂಡು ಇನ್ನಷ್ಟು ಅಪರಾಧ ಕೃತ್ಯವೆಸಗುತ್ತಿದ್ದಾರೆ. ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ 12 ಎಫ್‌ಐಆರ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಒದಗಿಸಿದ್ದೇವೆ” ಎಂದು ಬಾಲನ್ ನ್ಯಾಯಪೀಠದ ಗಮನಕ್ಕೆ ತಂದರು. 

ಈ ವೇಳೆ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್, “ಪ್ರಭಾಕರ ಭಟ್ ಅವರಿಗೆ 83 ವರ್ಷ ಪ್ರಾಯವಾಗಿದೆ, ಆದ್ದರಿಂದ ತಡೆಯಾಜ್ಞೆ ತೆರವು ಮಾಡಬಾರದು” ಎಂದು ವಾದಿಸಿದರು.

ಪ್ರಭಾಕರ ಭಟ್ ಮಾಡಿರುವ ಭಾಷಣದ ತುಣುಕನ್ನು ವಕೀಲ ಎಸ್. ಬಾಲನ್ ಓದಲು ಮುಂದಾದಾಗ, ‘ಮೈಕ್ ಆಫ್ ಮಾಡಿ ಓದಿ’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸೂಚನೆ ನೀಡಿದರು. ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿ ದ್ವೇಷ ಭಾಷಣ ಮಾಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಬೇಕು ಎಂದು ಬಾಲನ್ ನ್ಯಾಯಪೀಠವನ್ನು ಕೋರಿದರು. 

ಈ ಹಂತದಲ್ಲಿ, ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಅವರ ಪರ ವಕೀಲರು ನ್ಯಾಯಪೀಠಕ್ಕೆ ಖಚಿತ ಭರವಸೆ ನೀಡಿದರು. ಭಟ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಇದೇ ಅರ್ಜಿಯೊಂದಿಗೆ ಜೋಡಿಸಲು ಆದೇಶಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 16 ಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *

Advertisement


This will close in 3 seconds