ಹೋಟೆಲ್ ಗ್ರಾಹಕರಿಗೆ ಬಿಗ್ ರಿಲೀಫ್: ಗ್ಯಾಸ್ ದರ ಏರಿಕೆಯಾದ್ರೂ ಸದ್ಯಕ್ಕಿಲ್ಲ ಊಟ, ತಿಂಡಿ ಬೆಲೆ ಹೆಚ್ಚಳ..!

ಹಂಚಿಕೊಳ್ಳಿ

ಬೆಂಗಳೂರು: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್ ದರವನ್ನು ಸತತವಾಗಿ ಹೆಚ್ಚಿಸುತ್ತಿದ್ದರೂ, ರಾಜ್ಯದ ಹೋಟೆಲ್ ಗ್ರಾಹಕರಿಗೆ ಯಾವುದೇ ಶಾಕ್ ನೀಡದಿರಲು ಹೋಟೆಲ್ ಉದ್ಯಮಿಗಳು ನಿರ್ಧರಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸದ್ಯಕ್ಕೆ ಹೋಟೆಲ್ ತಿಂಡಿ ಹಾಗೂ ಊಟದ ಬೆಲೆಯಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಎಂದು ರಾಜ್ಯ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮಾಲೀಕರ ಸಂಘ ಅಧಿಕೃತವಾಗಿ ತಿಳಿಸಿದೆ.

ಮೇ ಹಾಗೂ ಜೂನ್ ತಿಂಗಳ ಆರಂಭದಲ್ಲೇ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ ಸರಣಿ ಹೆಚ್ಚಳ ಕಂಡುಬಂದಿದೆ. ಅದರಲ್ಲೂ ನಿನ್ನೆಯಷ್ಟೇ (ಜೂನ್ 1) ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರದಲ್ಲಿ ಬರೋಬ್ಬರಿ 46 ರೂಪಾಯಿ ಏರಿಕೆ ಮಾಡಲಾಗಿದೆ. ಈ ಸತತ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮದ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದ್ದು, ಮಾಲೀಕರಿಗೆ ಭಾರಿ ಆರ್ಥಿಕ ಹೊರೆ ಉಂಟಾಗಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದ್ದರೂ, ಸಾರ್ವಜನಿಕರ ಹಿತ ಕಾಯಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಪದೇ ಪದೇ ಹೋಟೆಲ್ ಊಟ, ತಿಂಡಿಗಳ ದರವನ್ನು ಹೆಚ್ಚಿಸುತ್ತಾ ಹೋದರೆ ಗ್ರಾಹಕರು ಹೋಟೆಲ್‌ಗಳಿಗೆ ಬರುವುದನ್ನು ಕಡಿತಗೊಳಿಸಬಹುದು ಅಥವಾ ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಕೊರತೆಯಾಗಬಹುದು ಎಂಬ ಆತಂಕ ಹೋಟೆಲ್ ಮಾಲೀಕರನ್ನು ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಿರುವ ರಾಜ್ಯ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಸಂಘವು, “ಗ್ಯಾಸ್ ದರ ಹೆಚ್ಚಳದ ಹೊರೆಯನ್ನು ಸದ್ಯಕ್ಕೆ ನಾವೇ ಭರಿಸಿಕೊಳ್ಳುತ್ತೇವೆ. ಆದರೆ ಗ್ರಾಹಕರಿಗೆ ತೊಂದರೆಯಾಗದಂತೆ ಹೋಟೆಲ್ ಆಹಾರ ಪದಾರ್ಥಗಳ ಬೆಲೆಯನ್ನು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಸುತ್ತೇವೆ” ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದಾಗಿ ಮಧ್ಯಮ ವರ್ಗದ ಹಾಗೂ ನಿತ್ಯ ಹೋಟೆಲ್ ಆಹಾರವನ್ನು ನೆಚ್ಚಿಕೊಂಡಿರುವ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

Leave a Reply

Your email address will not be published. Required fields are marked *

Advertisement


This will close in 3 seconds